

ಹುಬ್ಬಳ್ಳಿ : ಭಾರತೀಯ ಪುರಾತನ ಸಂಸ್ಕೃತಿಯಲ್ಲಿ ವಿದ್ಯೆ, ಅನ್ನ ಹಾಗೂ ಚಿಕಿತ್ಸೆ ಸೇವೆಯ ಕ್ಷೇತ್ರಗಳಾಗಿದ್ದವು. ಆದರೆ, ಇಂದಿನ ದಿನಗಳಲ್ಲಿ ಈ ಮೂರೂ ಸೌಲಭ್ಯಗಳು ಹೆಚ್ಚು ಹಣ ಗಳಿಸುವ ಕೇಂದ್ರಗಳಾಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಹಳೇ ಕಚೇರಿ ಬಳಿಯ ಭವಾನಿ ಬಿಲ್ಡಿಂಗ್ನಲ್ಲಿ ರಾಷ್ಟ್ರೆೊತ್ಥಾನ ರಕ್ತ ಕೇಂದ್ರದ ಸಹಕಾರದೊಂದಿಗೆ ಆರಂಭಿಸಲಾದ ಸೃಷ್ಟಿ ಪ್ರಯೋಗಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೃಷ್ಟಿ ಪ್ರಯೋಗಾಲಯದ ಆರಂಭ ಹಣ ಗಳಿಕೆಗಾಗಗಲಿ ಅಥವಾ ಪುಣ್ಯ ಪ್ರಾಪ್ತಿಗಾಗಲಿ ಅಲ್ಲ. ಬದಲಾಗಿ, ಸಮಾಜದವರೆಲ್ಲ ಬಂಧುಗಳು ಎಂಬ ಕಲ್ಪನೆಯೊಂದಿಗೆ ಇದನ್ನು ಆರಂಭಿಸಲಾಗಿದೆ. ಸಮಾಜದಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಅವರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಲಭಿಸಲಿ ಎಂಬ ಉದ್ದೇಶ ಸೃಷ್ಟಿ ಪ್ರಯೋಗಾಲಯದ್ದು ಎಂದು ತಿಳಿಸಿದರು.
ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರೆೊತ್ಥಾನ ಹಾಗೂ ಸೇವಾ ಭಾರತಿ ದೇಶದಾದ್ಯಂತ ಸಮಾಜ ಸೇವೆಯಲ್ಲಿ ತೊಡಗುವ ಜತೆಗೆ ರಾಷ್ಟ್ರ ಸಂಘಟನೆಯಲ್ಲಿಯೂ ನಿರತವಾಗಿವೆ ಎಂದರು.
ಉದ್ಘಾಟಿಸಿ ಆಶೀರ್ವಚನ ನೀಡಿದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ವೈದ್ಯಕೀಯ ಕ್ಷೇತ್ರದಲ್ಲಿ ನಿತ್ಯ ಹೊಸ ಸಂಶೋಧನೆಗಳು ನಡೆಯುತ್ತಿವೆ. ಆ ಮೂಲಕ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಲಭಿಸುತ್ತಿದೆ ಎಂದು ಹೇಳಿದರು.
ಅತಿಥಿಯಾಗಿದ್ದ ನರರೋಗ ತಜ್ಞ ಡಾ. ಕ್ರಾಂತಿ ಕಿರಣ ಹಾಗೂ ಸೃಷ್ಟಿ ಪ್ರಯೋಗಾಲಯದ ಮುಖ್ಯಸ್ಥ ಹರೀಶ ಜೋಶಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೆೊತ್ಥಾನ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಅತಿ ಕಡಿಮೆ ಬೆಲೆಗೆ ವೃದ್ಧ ರೋಗಿಗಳ ಮನೆಗೆ ಭೇಟಿ ನೀಡಿ ರಕ್ತ ಸಂಗ್ರಹ, ವೈದ್ಯಕೀಯ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು. ಕಿಡ್ನಿ, ಲಿವರ್ ಪರೀಕ್ಷೆ ಸೌಲಭ್ಯಗಳನ್ನು ಸಹ ನಡೆಸಲಾಗುವುದು ಎಂದು ತಿಳಿಸಿದರು.
ಹಿರಿಯ ಪೆಥೋಲಾಜಿಸ್ಟ್ ಡಾ. ಆಶಾ ದೇಶಪಾಂಡೆ, ವೀರೇಂದ್ರ ಛೇಡಾ ಹಾಗೂ ಇತರರು ಇದ್ದರು.