

ಧಾರವಾಡ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮುಂದೇನು ಎಂಬ ಗೊಂದಲ ಸಾಮಾನ್ಯ, ಈ ದಿಸೆಯಲ್ಲಿ ವಿದ್ಯಾರ್ಥಿ- ಪಾಲಕರಿಗೆ ಸಮರ್ಪಕ ಮಾರ್ಗದರ್ಶನ ಮಾಡಿ ಅವರ ಭವಿಷ್ಯ ರೂಪಿಸಲು ನೆರವಾಗುವ ಕಾರ್ಯ ಕೈಗೊಂಡಿರುವದು ಸ್ವಾಗತಾರ್ಹ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿಯ ಹಳಿಯಾಳ ರಸ್ತೆಯಲ್ಲಿರುವ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಎಜುಕೇಷನ್ ಎಕ್ಸ್‌ಪೋಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತೀಯರು ಕೌಶಲದಲ್ಲಿ ಬಹಳ ಹಿಂದೆ ಇದ್ದಾರೆ. ಕೌಶಲ ಹೊಂದಿದ ಯುವಜನರಿಗೆ ಬಹಳಷ್ಟು ಬೇಡಿಕೆ ಇದೆ. ಇಂತಹ ಮೇಳಗಳಿಂದ ಎಲ್ಲಿ ಯಾವ ಕೋರ್ಸ್ ಸಿಗುತ್ತದೆ, ಅದರ ಮೂಲಕ ಕೌಶಲ ಹೇಗೆ ಬೆಳೆಸಿಕೊಳ್ಳಬೇಕೆಂಬ ಮಾಹಿತಿ ಲಭ್ಯವಾಗುತ್ತದೆ ಎಂದರು.
ಪ್ರತಿಯೊಬ್ಬರೂ ಸೀಮಿತ ಪೆಟ್ಟಿಗೆಯಿಂದ ಹೊರಗೆ ಬಂದು ಆಲೋಚನೆ ಮಾಡಬೇಕು. ಚೀನಾ ಹಾಗೂ ಭಾರತ ಜನಸಂಖ್ಯೆಯಲ್ಲಿ ಸಮವಾಗಿವೆ. ಆದರೆ, ಅವರಲ್ಲಿ ಸ್ಕಿಲ್ ಜಾಸ್ತಿ ಇದೆ. ಹಾಗಾಗಿ ಕಳೆದ 10 ವರ್ಷದಲ್ಲಿ ಅವರ ಆರ್ಥಿಕತೆ 20 ಟ್ರಿಲಿಯನ್ ಆಗುವ ಮೂಲಕ ಡಬಲ್ ಆಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಾಮುಖ್ಯತೆ ಕೊಡಬೇಕು. ಅಂದಾಗಲೇ ಇತರ ದೇಶಗಳಿಗೆ ಸ್ಪರ್ಧೆ ನೀಡಲು ಸಾಧ್ಯ ಎಂದರು.
ಪಾರಂಪರಿಕ ಶಿಕ್ಷಣದ ಜತೆಗೆ ಉತ್ಪಾದಕತೆ ಹೆಚ್ಚಿಸುವ ಕಡೆ ಗಮನ ಹರಿಸಬೇಕು. ಇದನ್ನು ಕೇವಲ ಸರ್ಕಾರ ಮಾಡಬೇಕಿಂದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಇಂತಹ ಗುಣಾತ್ಮಕ ಶಿಕ್ಷಣ ನೀಡುವ ವಾತಾವರಣ ರೂಪಿಸಲು ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸಬೇಕು ಎಂದು ಸಚಿವರು ಸೂಚಿಸಿದರು.
ರಾಜ್ಯ ಸರ್ಕಾರ ಕಾಯಕವೇ ಕೈಲಾಸ ಎಂದು ಬೋಧಿಸಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಮಹಾತ್ಮ ಬಸವೇಶ್ವರರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಮಕ್ಕಳು ಓದಿಕೊಳ್ಳಬೇಕು. ದೇಶ ಕಟ್ಟುವ ಶಕ್ತಿ ನಿಮ್ಮಲ್ಲಿದ್ದು, ಶಕ್ತಿಯ ಸದುಪಯೋಗ ಮಾಡಿಕೊಳ್ಳಿ ಎಂದು ಹುರಿದುಂಬಿಸಿದರು.
ಅಭಿನಂದನೆ: ಪತ್ರಿಕೆ ಹಂಚಿಕೆ ಮಾಡುವವರಿಗೆ ಇ ಶ್ರಮ ಕಾರ್ಡ್ ನೀಡುವ ಮೂಲಕ ಭದ್ರತೆ ಒದಗಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಧಾರವಾಡದ ವಿತರಕ ಶಶಿಕಾಂತ ನೀಲಾಕರಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಗುರಿ- ಗುರು ಇರಬೇಕು: ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅತ್ಯಂತ ಸಂತೋಷದ ಹಾಗೂ ಲದಾಯಕ ಕೆಲಸ ಇದಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಮನುಷ್ಯನಿಗೆ ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ನೀವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಇಂತಹ ಸಾಧನೆಗೆ ಅಗತ್ಯ ತಿಳಿವಳಿಕೆ ಕೊಡುವ ಕೆಲಸವನ್ನು ವಿಜಯವಾಣಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದರಿ ನಗರ ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಧಾರವಾಡವನ್ನು ಮಾದರಿ ನಗರವಾಗಿ ರೂಪಿಸುವ ಪ್ರಯತ್ನಗಳು ಎಲ್ಲ ಇಲಾಖೆಗಳಿಂದ ನಡೆಯುತ್ತಿವೆ. ಈ ಕಾರ್ಯಕ್ಕೆ ವಿಜಯವಾಣಿಯ ಎಕ್ಸ್‌ಪೋ ಪೂರಕವಾಗಿದೆ. 10ನೇ ತರಗತಿ, ಪಿಯುಸಿ ನಂತರ ಏನು ಮಾಡಬೇಕು ಎಂಬುದು ಬಹಳಷ್ಟು ಜನರ ಪ್ರಶ್ನೆಯಾಗಿರುತ್ತದೆ. ಈ ಮಾಹಿತಿಯ ಜತೆಗೆ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕರಿಂದ ಆಗಬೇಕು. ಮಕ್ಕಳ ಸೃಜನಶೀಲತೆ ಗುರುತಿಸುವುದು ಒಂದು ಕಡೆಯಾದರೆ, ಅವರ ಕಲ್ಪನಾಲೋಕ ಹರಿಬಿಡಲು ಸ್ವಾತಂತ್ರ್ಯ ಕೊಡಬೇಕು, ಅದಕ್ಕೆ ವೇದಿಕೆ ಕಲ್ಪಿಸುವುದು ಅಷ್ಟೇ ಮುಖ್ಯ ಎಂದು ಹೇಳಿದರು.
ಸ್ವಂತ ವಿಚಾರ ಮಾಡುವ ವಿದ್ಯಾರ್ಥಿಗಳು ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಅಂಥವರನ್ನು ತಯಾರಿಸಬೇಕಾಗಿದೆ. ವಿದ್ಯಾರ್ಥಿಗಳು ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅಂಕಗಳು ಮುಖ್ಯವಲ್ಲ ಎಂದರು.
5ನೇ ತರಗತಿಯಲ್ಲೇ ಐಎಎಸ್ ಕನಸು: ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ನಾನು 5ನೇ ತರಗತಿಯಲ್ಲಿದ್ದಾಗ ಶಾಲೆಗೆ ಬಂದಿದ್ದ ಜಿಲ್ಲಾಧಿಕಾರಿಯವರನ್ನು ನೋಡಿ ಪ್ರೇರಣೆ ಪಡೆದೆ. ಆಗಲೇ ಐಎಎಸ್ ಕನಸು ನನ್ನಲ್ಲಿ ಹುಟ್ಟಿತು. 16 ವರ್ಷದಿಂದ 26ರ ಮಧ್ಯದ ವಯಸ್ಸಿನಲ್ಲಿ ಗುರಿ ಇಟ್ಟು ಓದಿದರೆ ಖಂಡಿತ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಜತೆಗೆ ಜೀವನದ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಹಬ್ ಆಗಿ ಬೆಳೆದಿರುವ ಧಾರವಾಡದಲ್ಲಿ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸುಧಾರಣೆ ಕುರಿತು ಚರ್ಚೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ವಿಜಯವಾಣಿ ಎಕ್ಸ್‌ಪೋ ಆಯೋಜನೆ ಮಾಡಿರುವುದು ಅತ್ಯಂತ ಅನುಕೂಲಕರವಾಗಿದೆ. ಧಾರವಾಡವನ್ನು ಫಲಿತಾಂಶ ಪಟ್ಟಿಯಲ್ಲಿ ಟಾಪ್‌ನಲ್ಲಿ ಬರುವಂತೆ ಮಾಡಬೇಕಿದೆ ಎಂದರು.
ಇಂದಿನ ಮಕ್ಕಳು ಬಹಳ ಚತುರರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯ ಇದೆ. ಅಂತಹ ಕೆಲಸವನ್ನು ವಿಜಯವಾಣಿ ಮಾಡುತ್ತಿದೆ. ಎಲ್ಲರ ಬದುಕಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಟರ್ನಿಂಗ್ ಪಾಯಿಂಟ್ ಇದ್ದಂತೆ. ಇಲ್ಲಿಯೇ ವಿದ್ಯಾರ್ಥಿ ತನ್ನ ಭವಿಷ್ಯ ನಿರ್ಧರಿಸಬೇಕಾಗುತ್ತದೆ. ಇದಕ್ಕೆ ಈ ಎಕ್ಸ್‌ಪೋ ನಿಮಗೆ ಸಹಾಯ ಮಾಡುತ್ತದೆ. ಇಲ್ಲಿ ಒಂದು ಸ್ಪಷ್ಟ ಚಿತ್ರಣ ನಿಮಗೆ ಸಿಗುತ್ತದೆ ಎಂದರು.
ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷರಾದ ಅರುಣ ಕೆ., ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಧರ್ಮೇಂದ್ರ ಮುರಾರಿ ಪ್ರಾರ್ಥನೆ ಹಾಡಿದರು. ವಿಜಯವಾಣಿ ವಿಜಯಪುರ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ವಂದಿಸಿದರು.