ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ

g.s.patil
Published on

ರೋಣ: ಮನುಷ್ಯನಿಗೆ ಶಿಕ್ಷಣ ಅತೀ ಮುಖ್ಯ. ಪ್ರತಿಯೊಬ್ಬರಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಸೂಕ್ತ ಪ್ರೋತ್ಸಹ ನೀಡಿದರೆ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಆರ್.ಪಾಟೀಲ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ನಂತರ ಮುಂದೇನು? ಎಂಬ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಾಗರವಿದ್ದಂತೆ. ಎಷ್ಟು ಕಲಿತರೂ ಸಾಲದು. ಹಣ, ಚಿನ್ನಾಭರಣ ಬೆಲೆಬಾಳುವ ವಸ್ತುಗಳನ್ನು ಕದಿಯಬಹುದು ಆದರೆ, ನಮ್ಮಲ್ಲಿ ಅಡಗಿರುವ ಪ್ರತಿಭೆ, ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣ ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಜೀವನದಲ್ಲಿ ಸಾಧನೆಯ ಮೂಲವೇ ಶಿಕ್ಷಣವಾಗಿದೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಜೀವನದಲ್ಲಿ ಗುರು ಹಾಗೂ ಗುರಿ ಬಹಳ ಮುಖ್ಯ. ವಿದ್ಯಾರ್ಥಿ ಜೀವನ ಎಂಬುದು ಸಸಿ ಇದ್ದಂತೆ ಅದು ಬೆಳೆಯಬೇಕಾದರೆ ಉತ್ತಮ ಆರೈಕೆ ಮುಖ್ಯ. ಅದರಂತೆಯೇ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಹಾಗೂ ಜೀವನದಲ್ಲಿ ಏನು ಸಾಧಿಸಬೇಕು ಎಂಬ ಸ್ಪಷ್ಟವಾದ ಗುರಿ ಇದ್ದಾಗ ಮಾತ್ರ ಪ್ರತಿಯೊಬ್ಬರು ಸಾಧನೆಯ ಶಿಖರವೇರಲು ಸಾಧ್ಯ ಎಂದು ಹೇಳಿದರು.

ಐ.ಎಸ್. ಪಾಟೀಲ, ಅಶೋಕ ಮಿರ್ಜಿ, ಬಿ.ಮಂಜುನಾಥ, ಪ್ರಾಚಾರ್ಯ ವೈ.ಸಿ. ಪಾಟೀಲ, ಐ.ಬಿ. ಕೊಟ್ಟೂರಶೆಟ್ಟರ, ಬಿ.ಎಫ್. ಚೇಗರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net