

| ಅರವಿಂದ ಅಕ್ಲಾಪುರ ಶಿವಮೊಗ್ಗ
ಶಿಕ್ಷಣ ಇಲಾಖೆಯಲ್ಲಿ ಮಹತ್ತರ ಬದಲಾವಣೆ ಮಾಡುತ್ತೇವೆ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ ಎಂದು ಪದೇಪದೆ ಹೇಳುವ ಸರ್ಕಾರ ಇದೀಗ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ತೀರ್ಮಾನ ಕೈಗೊಂಡಿದೆ. ಪರೀಕ್ಷಾ ಸಮಯದಲ್ಲಿ 300ಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ವರ್ಗ ಮಾಡಿ, ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ.
ಈಗಾಗಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮೂರು ತಿಂಗಳೊಳಗೆ ಪರೀಕ್ಷೆ ಎದುರಿಸಬೇಕಾದ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಇಲ್ಲದ ಸ್ಥಿತಿ ನಿರ್ವಣವಾಗಿದೆ. ಮೊದಲೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಬಡ್ತಿ ಪಡೆದವರಲ್ಲಿ ಗಣಿತ, ವಿಜ್ಞಾನ, ಸಮಾಜ ಶಿಕ್ಷಕರೇ ಹೆಚ್ಚಿದ್ದು, ಅವರ ಪಾಠವನ್ನು ಯಾರು ಮಾಡಬೇಕು ಎಂಬುದು ಶಾಲೆಯಲ್ಲಿ ಉಳಿದ ಶಿಕ್ಷಕರ ಪ್ರಶ್ನೆಯಾಗಿದೆ. ಇದು 8, 9ನೇ ತರಗತಿ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ಹಿನ್ನಡೆ ಉಂಟು ಮಾಡಲಿದೆ.
318 ಮಂದಿ ವರ್ಗಾವಣೆ: ಬೆಂಗಳೂರು ಹಾಗೂ ಮೈಸೂರು ವಿಭಾಗದ ಅರ್ಹ ಶಿಕ್ಷಕರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಕೆಲವು ಶಾಲೆಗಳಲ್ಲಿ ಇಬ್ಬರು, ಮೂವರು ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಬೆಂಗಳೂರು ದಕ್ಷಿಣ, ಉತ್ತರ, ಗ್ರಾಮಾಂತರ, ರಾಮನಗರ, ತುಮಕೂರು, ಮಧುಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಉಡುಪಿ, ಮಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು 318 ಶಿಕ್ಷಕರು ವರ್ಗಾವಣೆಯಾಗಿದ್ದಾರೆ.
ಮೂರು ತಿಂಗಳ ಅವಕಾಶವಿತ್ತು: ಶಿಕ್ಷಕರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಶಿಕ್ಷಕರ ಸೇವೆ, ಹಿರಿತನ, ಕಾರ್ಯಕ್ಷಮತೆ ಆಧಾರದಲ್ಲೇ ಬಡ್ತಿ ದೊರೆತಿದೆ. ವರ್ಗಾವಣೆಯೂ ಆಗಿದೆ. ವರ್ಷಕ್ಕೊಮ್ಮೆ ಬಡ್ತಿ ನೀಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಅಕಾಲದಲ್ಲಿ ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಪರೀಕ್ಷೆ ಹೊಸ್ತಿಲಲ್ಲಿ ವರ್ಗಾವಣೆ ಮಾಡಿರುವುದು ಅವೈಜ್ಞಾನಿಕ ಎಂಬ ಆಕ್ಷೇಪ ಶಿಕ್ಷಣ ವಲಯದಿಂದ ಕೇಳಿ ಬರುತ್ತಿದೆ. ಈಗ ವರ್ಗಾವಣೆಗೊಂಡಿರುವ ಶಿಕ್ಷಕರ ಸ್ಥಾನವನ್ನು ಇನ್ನೂ ಮೂರು ತಿಂಗಳು ತುಂಬುವುದು ಸಾಧ್ಯವಾಗದ ಮಾತು. ಈಗ ವರ್ಗಾವಣೆ ಪ್ರಕ್ರಿಯೆಗೆ ಕೈ ಹಾಕುವ ಸ್ಥಿತಿಯಲ್ಲಿ ಶಿಕ್ಷಣ ಇಲಾಖೆಯಿಲ್ಲ. ಇದು ವಿದ್ಯಾರ್ಥಿಗಳು ಹಾಗೂ ಪಾಲಕರ ವಲಯದ ಆತಂಕಕ್ಕೆ ಕಾರಣವಾಗಿದೆ.
ಇನ್ನೂ ನಡೆಯಲಿದೆ ವರ್ಗಾವಣೆ?: ಈಗಾಗಲೇ ಬೆಂಗಳೂರು ಹಾಗೂ ಮೈಸೂರು ವಲಯದ ಅರ್ಹ ಶಿಕ್ಷಕರಿಗೆ ಬಡ್ತಿಯೊಂದಿಗೆ ವರ್ಗಾವಣೆ ಮಾಡಿರುವ ಸರ್ಕಾರ ಧಾರವಾಡ, ಕಲಬುರಗಿ ವಿಭಾಗದಲ್ಲೂ ಇದೇ ತೀರ್ಮಾನ ಕೈಗೊಂಡರೆ ಅಚ್ಚರಿಯಿಲ್ಲ. ಅಲ್ಲಿಗೆ 600ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಾದಂತಾಗುತ್ತದೆ.
ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿರುವುದರಿಂದ ತರಗತಿಗಳಿಗೆ ಸಮಸ್ಯೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಬಡ್ತಿ ಜತೆಗೆ ವರ್ಗಾವಣೆ ಅನಿವಾರ್ಯ. ಇದರ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ರ್ಚಚಿಸುತ್ತೇನೆ.
| ಮಧು ಬಂಗಾರಪ್ಪ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ
ಪರಿಹಾರವೇನು?
ಸರ್ಕಾರ ಈಗಾಗಲೆ ಹೊರಡಿಸಿರುವ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯ ಬಹುದು. ಬಡ್ತಿ ಪಡೆದಿರುವ ಶಿಕ್ಷಕರು ಈ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರಿಗೂ ಹಾಲಿ ಇರುವ ಶಾಲೆಯಲ್ಲೇ ಮುಂದುವರಿಯಬೇಕು. ವರ್ಗಾ ವಣೆಗೊಂಡಿರುವ ಶಾಲೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವರದಿ ಮಾಡಿಕೊಳ್ಳಬೇಕು. ಉಳಿದಂತೆ ಸೇವಾ ಬಡ್ತಿ ಮುಂದುವರಿಯಲಿದೆ ಎಂದು ಸರ್ಕಾರ ಮತ್ತೊಂದು ಆದೇಶ ಪ್ರಕಟಿಸಿದರೆ ಅನುಕೂಲವಾಗಲಿದೆ ಎಂಬುದು ಅಭಿಪ್ರಾಯ.