ಉತ್ತಮ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಅಗತ್ಯ: ಸಚಿವ ಮಧು ಬಂಗಾರಪ್ಪ

udp-29-madhu
Published on

ಉಡುಪಿ: ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಸೇರಿದಂತೆ ಉತ್ತಮ ಶಿಕ್ಷಣ ಪಡೆಯಲು ಪೂರಕ ವಾತಾವರಣವನ್ನು ಸೃಷ್ಠಿಸಿ, ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್​. ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೈಕ್ಷಣಿಕ ವರ್ಷ ಪ್ರಾರಂಭದಿಂದಲೇ ವಿದ್ಯಾರ್ಥಿಗಳು ವಿಧ್ಯಾಬ್ಯಾಸದ ಚಟುವಟಿಕೆಗಳನ್ನು ಕೈಗೊಳ್ಳುವ ರೀತಿಯಲ್ಲಿ, ಶಿಕ್ಷಕರು ಅವರನ್ನು ಉತ್ತೇಜಿಸಬೇಕು. ವರ್ಷದ ಕೊನೆಯಲ್ಲಿ ಪರೀಕ್ಷಾ ದೃಷ್ಠಿಯಿಂದ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುವುದು ಸರಿಯಲ್ಲ , ಒಂದೊಮ್ಮೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತೀರ್ಣರಾದರೆ ಶೇ.50 ರಷ್ಟು ಅನುರ್ತೀರ್ಣಕ್ಕೆ ಶಿಕ್ಷಕರು ಸೇರಿದಂತೆ ಇಲಾಖೆ ಕಾರಣವಾಗುತ್ತದೆ. ಇದಕ್ಕೆ ಆಸ್ಪದ ನೀಡದೇ ಉತ್ತಮ ಶಿಕ್ಷಣವನ್ನು ನೀಡಲು ಶಿಕ್ಷಕರು ಮುಂದಾಗಬೇಕೆಂದು ಸೂಚನೆ ನೀಡಿದರು.

ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ವಿಳಂಬವಿಲ್ಲದೆ ವಿತರಣೆ ಮಾಡಬೇಕು. ಶೂ ಸೇರಿದಂತೆ ಮತ್ತಿತರ ಪರಿಕರಗಳನ್ನು ನೀಡುವಾಗ ಉತ್ತಮ ಗುಣಮಟ್ಟಗಳನ್ನು ನೀಡಬೇಕು ಎಂದರು.

ಜಿಲ್ಲೆಯು ಉತ್ತಮ ಶೈಕ್ಷಣಿಕ ಕೇಂದ್ರವಾಗಿದೆ ಆದರೆ ಕಳೆದ ಬಾರಿಯ ಎಸ್​.ಎಸ್​.ಎಲ್​.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸ್ಥಾನದಲ್ಲಿ ಕೆಳಮಟ್ಟದಲ್ಲಿದೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸ್ಥಾನವನ್ನು ಹೊಂದುವ ಹಾಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರು ಸೇರ್ಪಡೆಗೆ ಶಿಕ್ಷಕರು ಮುಂದಾಗಬೇಕು. ಶಿಕ್ಷಣ ಇಲಾಖೆ ಉತ್ತಮ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಜಾರಿಗೆ ತಂದು ಉತ್ತಮ ಸೌಲಭ್ಯಗಳನ್ನು ಒದಗಿಸಲು ಮುಂದಾಗಲಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಒಂದುಗೂಡಿಸಲು ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಶಾಸಕರರೊಂದಿಗೆ ಚರ್ಚಿಸಿ ಶಾಲೆಗಳನ್ನು ಒಗ್ಗೂಡಿಸಬೇಕು., ಇಲ್ಲಿನ ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆಯನ್ನು ಎಸ್​.ಡಿ.ಎಂ.ಸಿ ಮಟ್ಟದಲ್ಲಿ ತೀಮಾರ್ನಿಸಿ ಕಲ್ಪಿಸಬೇಕು ಎಂದರು.

ಶಾಲೆಗಳ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕಾಂಪೌಂಡ್​ ಸೇರಿದಂತೆ ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ದಿ ಕಾರ್ಯಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಬೇಕು. ಇವುಗಳನ್ನು ಕೈಗೊಳ್ಳಲು ಅನುದಾನದ ಕೊರತೆಯಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದಲ್ಲಿ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.

ಡಯಟ್​ ಸಂಸ್ಥೆಗಳು ಕ್ರಿಯಾಶೀಲವಾಗುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಗಳನ್ನು ಮಾಡಬೇಕು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೆಪಿಎಸ್​ ಶಾಲೆಗಳ ಸಂಖ್ಯೆಯನ್ನು ತಾಲೂಕುಗಳಲ್ಲಿ ಹೆಚ್ಚಿಸುವ ಉದ್ದೇಶವಿದ್ದು,ಯಾವ ಸ್ಥಳದಲ್ಲಿ ಶಾಲೆಗಳು ಅಗತ್ಯವಿದೆ ಎಂಬ ಬಗ್ಗೆ ಈಗಲೇ ಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿಪ್ರಿಯಾನೋ ಮೊಂಥೆರೋ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಡಯಟ್​ ಪ್ರಾಂಶುಪಾಲ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net