ನಲಿ, ಕಲಿ ಪಠ್ಯಕ್ರಮಕ್ಕೆ ಗುಡ್​ಬೈ, ಪಠ್ಯರೇತರ ಚಟುವಟಿಕೆಗೂ ಬ್ರೇಕ್​

Rashmi_Mahesh
Published on

ತುಮಕೂರು: ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಸಮಯ ಮೀಸಲಿಡಬೇಕು, ಪಠ್ಯೇತರ ಚಟುವಟಿಕೆಗಳಿಗೆ ರಜೆ ದಿನಗಳಂದು ಆಯೋಜಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್​ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪಠ್ಯೇತರ ಚಟುವಟಿಕೆಗಳನ್ನು ಕಲಿಕೆಯಿಂದ ಹೊರಗಿಟ್ಟು ಸೂಚನೆ ನೀಡಿದ್ದಕ್ಕೆ ಸಭೆಯ ಬಳಿಕ ಅಧಿಕಾರಿಗಳು ಬೇಸರಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ರಶ್ಮಿಮಹೇಶ್​, ಈಗಾಗಲೇ ಶಾಲೆಗಳಲ್ಲಿ ನಡೆಸುತ್ತಿರುವ ನಲಿ-ಕಲಿ ಪಠ್ಯಕ್ರಮ ಬದಲಾಯಿಸಿ ಪ್ರತ್ಯೇಕವಾಗಿ ತರಗತಿ ನಡೆಸಬೇಕು. ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಅಭಿವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಶೈಕ್ಷಣಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮಕ್ಕಳ ಕಲಿಕೆಗಾಗಿ ವಿನೂತನ ಕಾರ್ಯಚಟುವಟಿಕೆ, ಕ್ಷಮತೆ, ಬಲಸಂವರ್ಧನೆ ಮತ್ತು ಅನುಭವಾತ್ಮಕ ಕಲಿಕೆ ಅಳವಡಿಕೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯ ಸಂಕೇತವಾಗಿದೆ. ಜಿಲ್ಲೆಯಲ್ಲಿ ಅಳವಡಿಸಿಕೊಂಡಿರುವ ಕ್ಷಮತೆ, ಬಲಸಂವರ್ಧನೆ ಮತ್ತು ಅನುಭವಾತ್ಮಕ ಕಲಿಕೆ ಮಾದರಿ ರಾಜ್ಯ ಮಟ್ಟದಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳಿಗೆ ಪಠ್ಯ ವಿಷಯಗಳು ಸುಲಭವಾಗಿ ಅರ್ಥವಾಗಲು ಪ್ರಾಯೋಗಿಕ ತರಗತಿ ನಡೆಸಬೇಕು. ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಮಕ್ಕಳಿಗಾಗಿ ವಿಶೇಷ ತರಬೇತಿ, ರಸ ಪ್ರಶ್ನೆ ಕಾರ್ಯಕ್ರಮ, ಗುಂಪು ಸಂವಾದ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಕಲಿಕಾ ಪ್ರಗತಿ ವೀಕ್ಷಿಸಲು ಎಲ್ಲಾ ಅನುಷ್ಠಾನಾಧಿಕಾರಿಗಳನ್ನೂಳಗೊಂಡ ಕಾರ್ಯಪಡೆ ರಚಿಸಲಾಗಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಮೂಲಭೂತ ಸೌಕರ್ಯಾಭಿವೃದ್ಧಿ ಕಾಮಗಾರಿ ಹಾಗೂ ನರೇಗಾ ಯೋಜನೆಯಡಿ ಕೈಗೊಂಡ ಶಾಲಾ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net