

ಶಿವಮೊಗ್ಗ: ಬೇಸಿಗೆ ರಜೆ ಕಳೆದು ಎರಡು ತಿಂಗಳ ನಂತರ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿಗಳು ಮೇ 29ರಂದು ಪ್ರಾರಂಭಗೊಳ್ಳಲಿವೆ. ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ಶಾಲೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ತಯಾರಿ ಮಾಡಿಕೊಂಡಿದೆ.
ವಿದ್ಯಾರ್ಥಿಗಳು ಮರಳುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಆವರಣದಲ್ಲಿದ್ದ ಕಸ ಕಡ್ಡಿ, ಗಿಡ ಗಂಟೆಗಳನ್ನು ತೆರವುಗೊಳಿಸಲಾಗಿದೆ. ಶೌಚ ಗೃಹ, ಅಡುಗೆ ಮನೆಗಳನು ಸ್ವಚ್ಛಗೊಳಿಸುವ ಕಾರ್ಯವೂ ಪೂರ್ಣಗೊಂಡಿದೆ. ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ನೆರವಿನೊಂದಿಗೆ ಎಲ್ಲ ಶಾಲೆಗಳಿಗೆ ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯ ನಡೆದಿದೆ. ಶಾಲೆಗೆ ಬರುವ ಮಕ್ಕಳಿಗೆ ಸಿಹಿ ತಿನಿಸು ಹಾಗೂ ಹೂವಿನ ಸ್ವಾಗತ ದೊರೆಯಲಿದೆ. ಜತೆಗೆ ಮೊದಲ ದಿನವೇ ಪಠ್ಯ-ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ಶಾಲೆ ಆರಂಭಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದು ಈಗಾಗಲೇ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಗಿದೆ. ವಿಶೇಷವಾಗಿ ಹಬ್ಬದ ರೀತಿ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಯೊಂದಕ್ಕೆ ಬಂದು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಆಯಾ ಕ್ಷೇತ್ರದ ಶಾಸಕರನ್ನು ಆಹ್ವಾನಿಸಲಾಗಿದೆ. ಎಂಎಲ್‌ಸಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಲವೆಡೆ ಗುರುವಾರವೇ ಶಾಲೆ ಶುರು
ಸರ್ಕಾರ ಮೇ 29ರಿಂದ ಶಾಲೆಗಳ ಪ್ರಾರಂಭೋತ್ಸವ ನಡೆಸುತ್ತಿದೆ. ಮತ್ತೊಂದೆಡೆ ಕೆಲ ಖಾಸಗಿ ಶಾಲೆಗಳಲ್ಲಿ ಗುರುವಾರವೇ ಶಾಲೆ ಪ್ರಾರಂಭೋತ್ಸವ ಮಾಡಿದರು. ಮಕ್ಕಳಿಗೆ ಸಿಹಿ ವಿತರಿಸಿ ಶುಭಾಶಯ ಕೋರುತ್ತಾ ಶಿಕ್ಷಕರು ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಾಳೆ, ಮಾವಿನ ತೋರಣದಿಂದ ಸಿಂಗರಿಸಿ, ರಂಗೋಲಿ ಹಾಕಿ ಸ್ವಾಗತಿಸಿದರು. ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸೇರಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸವನ್ನೂ ನಡೆಸಿದರು.