

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಕುಸಿಯುತ್ತಿದೆ ಎಂದು ಸರ್ಕಾರ ಹಾಗೂ ಅಧಿಕಾರಿಗಳು ಶಿಕ್ಷಕ ಹಾಗೂ ಪಾಲಿಕರ ಮೇಲೆ ಆರೋಪ ಮಾಡಲಾಗುತ್ತಿದೆ.
ಆದರೆ ಶಾಲೆ ಪ್ರಾರಂಭಕ್ಕೆ ಇನ್ನು 10 ದಿನ ಮಾತ್ರ ಉಳಿದಿದ್ದು, ರಜೆ ಮುಗಿಸಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಬೇಡಿಕೆಯಷ್ಟು ಮಾತ್ರ್ರ ಶಾಲಾ ಶಿಕ್ಷಣ ಇಲಾಖೆಯಲ್ಲಿ ಪುಸ್ತಕಗಳು ಇಲ್ಲದೆ ಇರುವುದರಿಂದ ಶಿಕ್ಷಕರು ಮಾತ್ರ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಪ್ರತಿ ವರ್ಷ ಮೇ ಮೊದಲ ವಾರದಲ್ಲಿ ಸಂಬಂಧಪಟ್ಟ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಶಾಲಾ ಶಿಕ್ಷಣ ಇಲಾಖೆ ಪೂರೈಕೆ ಮಾಡಲಾಗುತ್ತಿದ್ದು, ಆದರೆ ಈ ಭಾರಿ ಸರ್ಕಾರದಿಂದ ಕೇವಲ 46.56 ರಷ್ಟು ಮಾತ್ರ ಪಠ್ಯ ಪುಸ್ತಕಗಳು ಬಂದಿದ್ದು, ಇದರಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಇದರಿಂದ ಶಿಕ್ಷಕರಿಗೆ ಬೋಧನೆ ಆರಂಭಿಸಲು ಸಾಧ್ಯವಾಗದು. ಬೇಸಿಗೆ ರಜೆ ಮುಗಿಸಿಕೊಂಡು ಮೇ 31ರಿಂದ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕಲಿಕೆಗೆ ಬೇಕಾದ ಪುಸ್ತಕಗಳೇ ಶಾಲೆಗಳಲ್ಲಿ ಲಭ್ಯವಿಲ್ಲ!
10 ತರಗತಿಗಿಲ್ಲ ಪಠ್ಯ ಪುಸ್ತಕಗಳು
ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು 35 ನೇ ಸ್ಥಾನ ಪಡೆದ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನಿರಂತವಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ಪ್ರಾರಂಭ ಮಾಡಬೇಕು ಎಂದು ಆದೇಶ ನೀಡಿದೆ. ಆದರೆ ಪ್ರಮುಖವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲ ವಿಭಾಗದ ಪಠ್ಯ ಪುಸ್ತಕ ಲಭಿಸಿಲ್ಲ. ಇದು ವಾರ್ಷಿಕ ಪರೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಮಕ್ಕಳು, ಪೋಷಕರನ್ನು ಕಾಡುತ್ತಿದೆ. ಶಾಲೆ ಆರಂಭದ ದಿನದಿಂದ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು. ಮಕ್ಕಳು ಆಸಕ್ತಿಯಿಂದ ಶಾಲೆಗಳತ್ತ ಬರಲು ಸಿದ್ದರಾಗಿದ್ದಾರೆ. ಆದರೆ, ಪಠ್ಯ ಪುಸ್ತಕ ಅವರ ಕೈ ತಲುಪದೆ ಕಲಿಕೆ ಕುಂಠಿತಗೊಂಡಿದೆ.
ರಜೆ ಇದ್ದ ಸಮಯದಲ್ಲಿಯೇ ಪುಸ್ತಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಮಕ್ಕಳು ಮರಳಿ ಶಾಲೆಗೆ ಬರುವ ಹೊತ್ತಿಗೆ ಎಲ್ಲ ಸಿದ್ಧತೆ ಮಾಡಿಕೊಂಡು ಅವರನ್ನು ಕಲಿಕೆಗೆ ಅಣಿಗೊಳಿಸಬೇಕಿತ್ತು. ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ, ತಾತ್ಸಾರ ಭಾವನೆಯಿಂದ ಮಕ್ಕಳು ಪಾಠದಿಂದ ದೂರ ಉಳಿಯುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಡವಾಗಿ ಪುಸ್ತಕ ಪೂರೈಸಿದರೆ ಮಕ್ಕಳು, ಶಿಕ್ಷಕರ ಮೇಲೆ ಹೊರೆಯಾಗಲಿದೆ. ಪರಿಪೂರ್ಣ ಕಲಿಕೆ ಸಾಧ್ಯವಾಗುವುದಿಲ್ಲ. ಶಿಕ್ಷಕರು ಒತ್ತಡದಲ್ಲಿ ಬೋಧನೆ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ವಾರ್ಷಿಕ ಪರೀಕ್ಷೆಯ ಒಳಗೆ ಎಲ್ಲ ಅಧ್ಯಾಯಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ. ಬೋಧನೆ, ಕಲಿಕೆ ಎರಡೂ ಅರ್ಧಂಬರ್ಧ ಆಗುತ್ತದೆ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು
ಸರ್ಕಾರದಿಂದ ಎಷ್ಟು ಪಠ್ಯ ಪುಸ್ತಕ ವಿತರಣೆ
ಜಿಲ್ಲೆಯ ಐದು ತಾಲೂಕಿನ 2630 ಶಾಲೆಗಳ ಒಟ್ಟು 41.06 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 40.82 ಲಕ್ಷ ಪಠ್ಯಪುಸ್ತಕವನ್ನು ಸರ್ಕಾರಿ ಶಾಲೆಗಳಿಗೆ ಹಾಗೂ 9.68 ಲಕ್ಷ ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸರ್ಕಾರದಿಂದ ವಿತರಣೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮನವಿ ಮಾಡಲಾಗಿತ್ತು. ಆದರೆ ಸರ್ಕಾರದಂದ ಕೇವಲ 23.69 ಲಕ್ಷ ಮಾತ್ರ ಸರ್ಕಾರಿ ಶಾಲೆಗೆ ಹಾಗೂ 6.73 ಲಕ್ಷ ಪುಸ್ತಕಗಳನ್ನು ಖಾಸಗಿ ಶಾಲೆಗಳಿಗೆ ನೀಡಲಾಗಿದೆ.
ಈ ಪೈಕಿ ದೇವದುರ್ಗ ತಾಲೂಕಿಗೆ 447,359 ಸರ್ಕಾರಿ ಶಾಲೆಗೆ,75555 ಖಾಸಗಿ ಶಾಲೆಗೆ ವಿತರಣೆ ಮಾಡಲಾಗಿದೆ.ಲಿಂಗಸೂಗೂರು ತಾಲೂಕಿಗೆ 5,34,622 ಸರ್ಕಾರಿ ಶಾಲೆಗೆ, 1,17,008 ಖಾಸಗಿ ಶಾಲೆಗೆ ವಿತರಣೆ ಮಾಡಲಾಗಿದೆ. ಮಾನ್ವಿ ತಾಲೂಕಿಗೆ 4,25,462 ಸರ್ಕಾರಿ ಶಾಲೆಗೆ, 1,21,645 ಖಾಸಗಿ ಶಾಲೆಗೆ ವಿತರಣೆ ಮಾಡಲಾಗಿದೆ. ರಾಯಚೂರು ತಾಲೂಕಿಗೆ 5,57,880 ಸರ್ಕಾರಿ ಶಾಲೆಗೆ, 2,40,291 ಖಾಸಗಿ ಶಾಲೆಗೆ ವಿತರಣೆ ಮಾಡಲಾಗಿದೆ ಮತ್ತು ಸಿಂಧನೂರು ತಾಲೂಕಿಗೆ 4,04,289 ಸರ್ಕಾರಿ ಶಾಲೆಗೆ, 11,88,49 ಖಾಸಗಿ ಶಾಲೆಗೆ ವಿತರಣೆ ಮಾಡಲಾಗಿದೆ.
ಈ ಬಾರಿ ಶಾಲೆ ಪ್ರಾರಂಭಕ್ಕೂ ಮೊದಲೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ. ಈಗಾಗಲೇ ಸರ್ಕಾರದಿಂದ ಶೇ.50 ರಷ್ಟು ಪುಸ್ತಕಗಳು ಬಂದಿದ್ದು 10 ದಿನದಲ್ಲಿ ಬಾಕಿ ಪುಸ್ತಕಗಳನ್ನು ಸರ್ಕಾರ ಸೊರಬರಾಜು ಮಾಡಲಾಗುವುದು.
ಡಾ.ಕೆ.ಡಿ. ಬಡಿಗೇರ ಡಿಡಿಪಿಐ ರಾಯಚೂರು