ಶಿಕ್ಷಣ ಮಗುವಿನ ಮೂಲಭೂತ ಹಕ್ಕು - ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಹೇಳಿಕೆ

Nilogal School Dhakalati Andholana
ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಗನವಾಡಿ, ಶಾಲಾ ಮಕ್ಕಳ ದಾಖಲಾತಿ ಆಂದೋಲನಕ್ಕೆ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಮುಕ್ಕಣ್ಣವರ ಚಾಲನೆ ನೀಡಿದರು.
Published on

ಅಳವಂಡಿ: ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಅದನ್ನು ಕಸಿಯುವ ಪ್ರಯತ್ನ ಮಾಡಬೇಡಿ. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಮನವಿ ಮಾಡಿದರು.

ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗನವಾಡಿ, ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ಅನೇಕ ಶೈಕ್ಷಣಿಕ ಸೌಲಭ್ಯ ನೀಡಿದೆ. ಅವುಗಳ ಉಪಯೋಗ ಮಾಡಿಕೊಂಡು ಉತ್ತಮ ನಾಗರಿಕರಾಗಿ. ಪಾಲಕರು ಕೂಡ ಮಕ್ಕಳನ್ನು ಶಾಲೆಯಿಂದ ಹೊರಗಿಡದೆ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ಬಸವರಾಜ ಕಮತರ ಮಾತನಾಡಿ, 6ರಿಂದ 14 ವರ್ಷದೊಳಿಗಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. 6 ವರ್ಷ ತುಂಬಿದ ಮಕ್ಕಳನ್ನು ಶಾಲೆಗೆ ದಾಖಲಿಸಿ, ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕರಿಸಿ ಎಂದರು.

ವಿದ್ಯಾರ್ಥಿನಿಯರಿಂದ ಕಳಸ, ಕುಂಭ ಹಾಗೂ ಡಾ.ಬಿ.ಆರ್.ಅಂಬೇಡ್ಕರ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮುಂತಾದ ಹಲವು ನಾಯಕರ ವೇಷಭೂಷಣ ತೊಟ್ಟು, ಡೊಳ್ಳಿನ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಮುಕ್ಕಣ್ಣವರ, ಸದಸ್ಯರಾದ ಕನಕಮೂರ್ತಿ, ಲಕ್ಷ್ಮಣ, ವೆಂಕಟೇಶ, ಈರಪ್ಪ ಮಾಗಳ, ಶಿಕ್ಷಕರಾದ ವೆಂಕರಡ್ಡಿ ನಾಗರಳ್ಳಿ, ಬಸವರಾಜ ಜೀರ, ಸಂಗಪ್ಪ ರಾಟಿ, ಮುತ್ತು ಬನ್ನಿಕೊಪ್ಪ, ಮಂಜುನಾಥ ತಗಡಿನಮನಿ, ಚನ್ನಪ್ಪ ಕುರಿಗಾರ, ನಾಗಪ್ಪ ಶಿರನಹಳ್ಳಿ, ಶ್ವೇತಾ ಬೆಣಕಲ್, ಗಂಗವ್ವ ಗೌಡ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net