

ಶಿಗ್ಗಾಂವಿ: ಮಕ್ಕಳಿಗೆ ಆತ್ಮ ವಿಶ್ವಾಸದ ಬಲ ತುಂಬುವುದರ ಜತೆಗೆ ಉನ್ನತ ಶಿಕ್ಷಣದ ಅವಶ್ಯಕತೆ ಇದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಗದಗಿನ ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ಭಾರತ ಸೇವಾ ಸಂಸ್ಥೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸಮರ್ಥ ನಾಯಕರನ್ನು ಸೃಷ್ಟಿಸಲು ಸಾಧ್ಯ. ಶಿಕ್ಷಣದಿಂದ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರಬಹುದು. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಇಲ್ಲದಿದ್ದರೆ ಪರಸ್ಪರ ಅಪನಂಬಿಕೆ, ಸಂದೇಹ, ದ್ವೇಷ, ಅಸೂಯೆಗಳು ಸೃಷ್ಟಿ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದ ಅವಶ್ಯ ಇದೆ ಎಂದು ಹೇಳಿದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಮಕ್ಕಳ ಬುದ್ಧಿಶಕ್ತಿಗೆ ಅನುಗುಣವಾಗಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ನೀಡಿ ಮಕ್ಕಳ ಸವಾರ್ಂಗೀಣ ಪ್ರತಿಭೆಯನ್ನು ಹೊರ ಹೊಮ್ಮಿಸಬೇಕಿದೆ ಎಂದರು.
ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿದರು. ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ, ಬಿಇಒ ಎಂಬಿ ಅಂಬಿಗರ, ಸಿ.ವಿ. ಮತ್ತಿಗಟ್ಟಿ, ಈರಣ್ಣ ಮಹಾಜನಶೆಟ್ಟರ, ಡಿ.ಎ. ಗೊಬ್ಬರಗುಂಪಿ, ಎಸ್.ವಿ. ಕುಲಕರ್ಣಿ, ಬಸವರಾಜ ಹೊಸಪೇಟಿ, ಭರತ್ ಕಳ್ಳಿಮನಿ, ಇತರರಿದ್ದರು.