

ಹುಬ್ಬಳ್ಳಿ: ಬದುಕಿನ ಬಹುದೊಡ್ಡ ಮೂಲ ಮಂತ್ರ ಶಿಕ್ಷಣ ಮತ್ತು ಸಂಸ್ಕಾರ. ತಾಯಿ ಮೊದಲು ಗುರು ಆಗಿರುವುದರಿಂದ ಆಕೆಯಿಂದಲೇ ಇವೆರಡೂ ಬಳವಳಿಯಾಗಿ ಬರುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಿಪ್ರಾಯಪಟ್ಟರು.
ಅವ್ವ ಸೇವಾ ಟ್ರಸ್ಟ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯ ಸ್ಮರಣೋತ್ಸವ ಹಾಗೂ ಅವ್ವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಗಿಂತ ಮಿಗಿಲಾದ ದೇವರಿಲ್ಲ. ದೇವರು ಮತ್ತು ಧರ್ಮ ಬದಲಾವಣೆ ಮಾಡಲು ಹೊರಟಿದ್ದೇವೆ. ತಾಯಿ ಮಾತು ಅಮೃತ ಸಮಾನ. ಆಕೆಯ ಮಮತೆ, ವಾತ್ಸಲ್ಯ, ಸಂಸ್ಕಾರವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದರು.
ಬಸವರಾಜ ಹೊರಟ್ಟಿ ಅವರಂಥ ಪುತ್ರನನ್ನು ಗುರವ್ವ ಹೆತ್ತಿದ್ದಾರೆ. ಇಡೀ ನಾಡು ಅವರನ್ನು ಕೊಂಡಾಡುತ್ತಿದೆ. ಇದಕ್ಕೆಲ್ಲ ಆ ತಾಯಿ ನೀಡಿದ ಪ್ರೀತಿ, ಸಂಸ್ಕಾರದ ಬಲ ಕಾರಣ. ತಾಯಿ ಹೆಸರಲ್ಲಿ ಪ್ರಶಸ್ತಿ ಪಡೆದವರ ಮೇಲೂ ಭಾರ ಇದೆ. ಇನ್ನಷ್ಟು ಸಾಧನೆ ಮಾಡಬೇಕು. ಸಮಾನಕ್ಕೆ ಮಾದರಿಯಾಗಬೇಕು ಎಂದು ಪ್ರಶಸ್ತಿ ಪುರಸ್ಕೃತರಿಗೆ ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ತಾಯಿಯಿಂದ ಮಕ್ಕಳಿಗೆ ಸಂಸ್ಕಾರ ಲಭಿಸುತ್ತದೆ. ಅವಿಭಕ್ತ ಕುಟುಂಬವಿದ್ದ ಕಾಲದಲ್ಲಿ ಇವೆಲ್ಲ ಹೇರಳವಾಗಿದ್ದವು. ಕೂಡ ಕುಟುಂಬ ಮಾಯವಾಗುತ್ತಿವೆ. ಆದರೂ ಅವ್ವನ ಪ್ರೀತಿ, ಕಾಳಜಿ, ತ್ಯಾಗ, ಆಸರೆ, ಸರ್ವಸ್ವ ಕಡಿಮೆ ಆಗ ಕೂಡದು. ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆಯಲಿ ಅದರ ಹಿಂದೆ ತಾಯಿ ಸಂಸ್ಕಾರ, ಪರಿಶ್ರಮ ಇರುವುದು ಸುಳ್ಳಲ್ಲ ಎಂದರು.
ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇಲಕಲ್ಲ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ರಾಜಕೀಯ ಮುತ್ಸದ್ದಿ ಎಸ್.ಆರ್. ಪಾಟೀಲ ಮಾತನಾಡಿದರು. ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಉಪನ್ಯಾಸ ನೀಡಿದರು.
ರಾಜಕೀಯ ಮುತ್ಸದ್ದಿ ಎಸ್.ಆರ್. ಪಾಟೀಲ, ಪತ್ರಕರ್ತ ಚಂದ್ರಕಾಂತ ವಡ್ಡು, ಕಥೆಗಾರ ಡಾ. ಸಂಗಮನಾಥ ಲೋಕಾಪುರ, ಸಿತಾರ್ ವಾದನ ಮಾಂತ್ರಿಕ ಛೋಟೆ ರಹಮತ್ ಖಾನ್, ಗಾಯಕಿ ರೇಖಾ ಹೆಗಡೆ, ಯಕ್ಷಗಾನ ಕಲಾವಿದ ಕೇಶವ ಹೆಗಡೆ ಕೊಳಗಿ, ಉದ್ಯಮಿ ಮಹೇಂದ್ರ ಸಿಂಘಿ, ಎಸ್. ಮಹದೇವಯ್ಯನವರು, ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಕ್ರೀಡಾಪಟು ತ್ರಿಶಾ ಜಡಲಾ, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊಣ್ಣೂರ ಅವರಿಗೆ ಅವ್ವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹೇಮಲತಾ ಹೊರಟ್ಟಿ, ವಸಂತ ಹೊರಟ್ಟಿ, ಭರತ ಹೊರಟ್ಟಿ, ಶಾಸಕರಾದ ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ ಇತರರು ಇದ್ದರು.