ಶಿಕ್ಷಣ ಪಡೆದು ಸವಾಲುಗಳ ಎದುರಿಸಿ

Untitled design (2)
Published on

ದೇವದುರ್ಗ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳೇ ಸಿಗುವುದು ಕಷ್ಟ. ಪರಿಶ್ರಮ-ಪ್ರತಿಭೆಯಿಂದ ಅವಕಾಶ ಪಡೆದರೂ ದೌರ್ಜನ್ಯ, ದಬ್ಬಾಳಿಕೆ ಎದುರಿಸಬೇಕು. ಮಹಿಳೆಯರನ್ನು ಸಮಾಜ ಬೆಳೆಸುವುದಕ್ಕಿಂತ ಬಳಸಿಕೊಂಡಿದ್ದೇ ಹೆಚ್ಚು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಉಪಮುಖ್ಯ ಲೆಕ್ಕಾಧಿಕಾರಿ ಜಿ.ಎಸ್.ಶ್ರೀದೇವಿ ಆನಂದ ಕಳವಳ ವ್ಯಕ್ತಪಡಿಸಿದರು.


ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕಗುರುಪೀಠದಲ್ಲಿ ಭಾನುವಾರ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಹಾಲುಮತ ಮಾತೃ ಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅನಾದಿ ಕಾಲದಿಂದಲೂ ಮಹಿಳೆಯರು ಜಾಗೃತಿ ಕೊರತೆ ಪರಿಣಾಮ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮನೆ ಕೆಲಸ, ಮಕ್ಕಳ ಆರೈಕೆಗೆ ಮಹಿಳೆಯರನ್ನು ಸೀಮಿತ ಮಾಡಲಾಗಿತ್ತು. ಆಧುನಿಕ ಸಮಾಜದಲ್ಲೂ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ. ಎಲ್ಲ ಸವಾಲುಗಳಿಗೆ ಶಿಕ್ಷಣವೇ ಅಸ್ತ್ರವಾಗಿದ್ದು, ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ಸವಾಲುಗಳನ್ನು ಎದುರಿಸಬೇಕಿದೆ. ಮಹಿಳೆಯರು ಧಾರಾವಾಹಿ ನೋಡುವುದನ್ನು ಕಡಿಮೆ ಮಾಡಿ, ಮಕ್ಕಳ ಕಲಿಕೆ ಕಡೆಗೆ ಗಮನ ಹರಿಸಬೇಕು ಎಂದರು.


ಪೊಲೀಸ್ ಅಧಿಕಾರಿ ಅನಿತಾ ಹದ್ದಣ್ಣನರ ಮಾತನಾಡಿದರು. ಸಿದ್ದರಾಮಾನಂದ ಸ್ವಾಮೀಜಿ, ಕೆ.ಆರ್.ನಗರದ ಶಿವಾನಂದ ಸ್ವಾಮೀಜಿ, ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಚಿತ್ರಾ ಪಾಟೀಲ್, ಪೌರಾಡಳಿತ ಇಲಾಖೆ ಯೋಜನಾ ನಿರ್ದೇಶಕಿ ಶಾಲಿನಿ ಚಂದ್ರಶೇಖರ, ಡಾ.ವಿಜಯಲಕ್ಷ್ಮೀ, ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೆ.ಆರ್.ಪ್ರಭಾವತಿ, ವಚನಾ, ಗಂಗೂಬಾಯಿ ಮೇಟಿ, ಶಶಿಕಲಾ, ರಕ್ಷಿತಾ ಈಟಿ, ನಿರ್ಮಲಾ ಬರಗಾಲಿ, ವಿದ್ಯಾ ಮೇಟಿ, ನಾಗವೇಣಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಚಂದ್ರಶೇಖರ, ಪಿಐ ಹೊಸಕೇರಪ್ಪ, ಸಿಪಿಐ ಗುಂಡುರಾವ್, ಪಿಎಸ್‌ಐ ಸುಜಾತಾ ನಾಯಕ, ವಿ.ಎಂ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net