

ಮುಂಡರಗಿ: ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಸಮಾಜ ಗುರುತಿಸುವಂತಹ ಕೆಲಸ ಮತ್ತು ಸಾಧನೆ ಮಾಡಬೇಕು ಎಂದು ದಿವಾಣಿ ನ್ಯಾಯಾಧೀಶೆ ಜ್ಯೋತಿ ಕಾಗಿನಕರ ಹೇಳಿದರು.
ಪಟ್ಟಣದ ಕಾವೇರಿ ಹೋಟೆಲ್ ಸಭಾಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ, ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಮತ್ತು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬರಲ್ಲೂ ಸಾಧಿಸುವಂತಹ ಅರ್ಹತೆ ಇರುತ್ತದೆ. ನಿಷ್ಕಾಳಜಿ ವಹಿಸದೇ ಶಿಕ್ಷಣವಂತರಾಗಬೇಕು. ಮಕ್ಕಳು ಹಂತ ಹಂತವಾಗಿ ಯಶಸ್ಸು ಕೀರ್ತಿ ಹೆಚ್ಚಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ಶಿಕ್ಷಣಕ್ರಾಂತಿ ಮಾಡಿದರು’ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಕಾರ್ಮಿಕರು ತಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಯು.ಸಿ. ಹಂಪಿಮಠ ಮಾತನಾಡಿ, ಕಷ್ಟಪಟ್ಟು ಅಭ್ಯಾಸ ಮಾಡಿದರೆ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್, ಪೆನ್ ಶಾಲಾ ಸಾಮಗ್ರಿ ನೀಡಿ ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ದೇವಪ್ಪ ಚಿಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಸ್ಥಾಪಕ ಅಡಿವೆಪ್ಪ ಚಲವಾದಿ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಆರ್. ಜಾಧವ್, ಕರಬಸಪ್ಪ ಹಂಚಿನಾಳ, ಡಾ.ಕುಮಾರಸ್ವಾಮಿ ಹಿರೇಮಠ, ಮಂಜುನಾಥ ಕಟ್ಟಿಮನಿ, ಹಸನ್ ಅಳವಂಡಿ, ಹನುಮಂತಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ತಿಪ್ಪೇಶ ರಾಯದುರ್ಗ, ಅರ್ಜುನ ಗುಡಿ ಇದ್ದರು.