

ಕಾರವಾರ:ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೆಗೌಡ ಹಾಗೂ ಸಚಿವ ಮಧು ಬಂಗಾರಪ್ಪ ವಿರುದ್ಧ ರಾಷ್ಟ್ರೀಯ ಈಡಿಗ ಮಹಾ ಮಂಡಳ ಹರಿಹಾಯ್ದಿದೆ.
ಪತ್ರಿಕಾಗೋಷ್ಠಿ ನಡೆಸಿದ ಮಹಾ ಮಂಡಳದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ನಾಯ್ಕ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಣವಾನಂದ ಸ್ವಾಮಿಗಳನ್ನು "ತಲೆಹರಟೆ ಸ್ವಾಮಿಗಳು" ಎಂದಿದ್ದಾರೆ. ವಿಶ್ವ ಹಿಂದು ಪರಿಷತ್ ಸದಸ್ಯರು ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 8 ರಂದು ಕೈಕಾಲು ಜೋಡಣೆ ಉಚಿತ ಶಿಬಿರ
ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೆಗೌಡ ಅವರು, ಪ್ರಣವಾನಂದ ಸ್ವಾಮಿಗಳಿಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ ಇಬ್ಬರ ಹೇಳಿಕೆಯನ್ನು ನಾವು ಖಂಡಿಸಿದ್ದೇವೆ ಎಂದರು.
ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮಿಗಳು ಈಡಿಗ, ಬಿಲ್ಲವ, ನಾಮಧಾರಿ, ಪೂಜಾರಿ ಎಲ್ಲ 26 ಉಪ ಪಂಗಡದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸಮಾಜದ ಏಳ್ಗೆಗೆ 780 ಕಿಮೀ ಪಾದಯಾತ್ರೆ ನಡೆಸಿದ್ದಾರೆ. ಸ್ವಾಮಿಗಳ ಏಳ್ಗೆ ಸಹಿಸದೇ ಅವರ ವಿರುದ್ಧ ಕೆಲವರು ಮಾತನಾಡುತ್ತಿದ್ದಾರೆ.
ಮೂರು ವರ್ಷಗಳಿಂದ ಪ್ರಣವಾನಂದ ಸ್ವಾಮಿಗಳ ಜತೆ ವೇದಿಕೆ ಹಂಚಿಕೊಂಡ ತಿಮ್ಮೆಗೌಡ ಅವರು ಈಗ ಯಾರದ್ದೊ ಕುಮ್ಮಕ್ಕಿನಿಂದ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ.
ಪ್ರಣವಾನಂದ ಸ್ವಾಮಿಗಳು ಸಮಾಜದ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಾಣುತ್ತಿದ್ದಾರೆ. ಎಲ್ಲರಿಗೂ ಗೌರವ ಕೊಡಬೇಕು ಎಂದು ಹೇಳಿದ್ದಾರೆ. ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಾರೆ ಎಂಬ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ನಾವು ಪ್ರಣವಾನಂದ ಸ್ವಾಮಿಗಳ ಜತೆಗೆ ಇದ್ದೇವೆ. ಉಡುಪಿಯಲ್ಲಿ ಸದ್ಯದಲ್ಲೇ ಆರ್ಯ, ಈಡಿಗ, ಬಿಲ್ಲವ ಸಮಾಜಗಳ ಬೃಹತ್ ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲಿ ನಾವೆಲ್ಲ ಪ್ರಣವಾನಂದ ಸ್ವಾಮಿಗಳ ಜತೆ ನಿಲ್ಲುತ್ತೇವೆ. ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದರು.
ಸಂಘದ ಅಂಕೋಲಾ ತಾಲೂಕು ಘಟಕದ ಅಧ್ಯಕ್ಣ ಡಿ.ಜಿ.ನಾಯ್ಕ ಮಾತನಾಡಿ, ಪ್ರಣವಾನಂದ ಸ್ವಾಮಿಗಳು ಯಾವುದೇ ಸಂಘದ ಬಗ್ಗೆ ಮಾತನಾಡಿಲ್ಲ. ಅವರನ್ನು ಸ್ವಾಮೀಜಿ ಎಂದು ಒಪ್ಪುವುದು, ಬಿಡುವುದು ಪ್ರತಿಯೊಬ್ಬ ಈಡಿಗನ ಹಕ್ಕು. ಅದಕ್ಕೆ ಯಾರ ಅನುಮತಿ ಬೇಕಿಲ್ಲ. ಕೇವಲ ಬೆಂಗಳೂರಿನ ಉದ್ಯಮಿಗಳ ಕೂಟ ರಚಿಸಿ, ಇಡೀ ರಾಜ್ಯ ಸಂಘ ಎನ್ನುತ್ತಿದ್ದೀರಿ. ಉತ್ತರ ಕನ್ನಡಕ್ಕೆ ಎಷ್ಟು ಸಾರಿ ಭೇಟಿ ನೀಡಿದ್ದೀರಿ. ಎಷ್ಟು ತಾಲೂಕು ಸಂಘ ಮಾಡಿದ್ದೀರಿ ಎಂದು ತಿಮ್ಮೆಗೌಡ ಅವರನ್ನು ಪ್ರಶ್ನೆ ಮಾಡಿದರು.
ಮಹಾ ಮಂಡಳಿ ಪದಾಧಿಕಾರಿಗಳಾದ ರಾಘವೇಂದ್ರ ಕೊಂಡಳ್ಳಿ, ಶ್ರೀಧರ ನಾಯ್ಕ, ಲೋಕೇಶ ನಾಯ್ಕ, ಸತೀಶ ಕುಮಾರ ನಾಯ್ಕ, ಅಚ್ಯುತ ನಾಯ್ಕ, ಸಚಿನ್ ನಾಯ್ಕ, ಶ್ರೀನಿವಾಸ ನಾಯ್ಕ, ಅರುಣ ನಾಯ್ಕ, ನಾಗರಾಜ ಮಂಜಗುಣಿ ಸುದ್ದಿಗೋಷ್ಠಿಯಲ್ಲಿದ್ದರು.