

ಕುಣಿಗಲ್: ಕರೊನಾ ಭೀತಿಯಿಂದ ಭಕ್ತರ‌್ಯಾರೂ ದೇವಸ್ಥಾನಗಳ ಕಡೆ ಬರುತ್ತಿಲ್ಲ. ಹೀಗಾಗಿ ಸುಮ್ಮನೆ ಕಾಲ ಕಳೆಯುವುದಕ್ಕಿಂತ ಸಿಕ್ಕ ಸಮಯವನ್ನು ಕೃಷಿ ಚಟವಟಿಕೆಗೆ ಬಳಸಿಕೊಳ್ಳಲು ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಹೆಜ್ಜೆಯಿಟ್ಟಿದೆ.
ಮುಜರಾಯಿ ಇಲಾಖೆ ಒಡೆತನದಲ್ಲಿರುವ ಸಿದ್ದಲಿಂಗೇಶ್ವರ ದೇವಾಲಯದ ಸಿಬ್ಬಂದಿಗೆ ಸರ್ಕಾರ ವೇತನ ನೀಡುತ್ತಿದ್ದರೂ ಸುಮ್ಮನೆ ಸಂಬಳ ತೆಗೆದುಕೊಳ್ಳುವುದು ಹೇಗೆ ಎಂದುಕೊಂಡ ಸಿಬ್ಬಂದಿ ದೇವಸ್ಥಾನದ ನೂರಾರು ಎಕರೆಯಲ್ಲಿ ಕೃಷಿ ಮಾಡಲು ಮುಂದಾಗಿದೆ. ದೇವಸ್ಥಾನದ ಇಒ ಲಕ್ಷ್ಮೀ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಕಗ್ಗೆರೆ ಸಿದ್ದಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನಲ್ಲಿ 1500 ಬಾಳೆ ಗಿಡ ನೆಟ್ಟಿದ್ದಾರೆ. ಈಗಾಗಲೇ ತೆಂಗಿನ ಸಸಿ ನೆಡಲಾಗಿದ್ದು, ಅವುಗಳ ನಡುವೆಯೇ ಬಾಳೆ ಗಿಡ ನೆಡಲಾಗಿದೆ. ಕೃಷಿಯ ಆದಾಯ ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಲಿ ಎಂಬುದು ಆಡಳಿತ ಮಂಡಳಿ ಉದ್ದೇಶ.
ಕರೊನಾ ಭೀತಿಯಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೂ ಕೆಲಸದ ಒತ್ತಡವೂ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಜಮೀನಿನಲ್ಲಿ ಕೃಷಿ ನಡೆಸಲು ತೀರ್ಮಾನ ಕೈಗೊಂಡು ಬಾಳೆ ಗಿಡ, ಹೂ ಗಿಡ ಸೇರಿ ಅನೇಕ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಲಕ್ಷ್ಮೀ ಇಒ, ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನ