

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ಆರಂಭವಾಗಿ ವಾರದಲ್ಲಿಯೇ ಜಿಲ್ಲೆಯ 25 ಜನ ಶಿಕ್ಷಕರು ತಮಗೆ ನೀಡಿದ ಸಮೀಕ್ಷೆಯ ಗುರಿಯನ್ನು ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮತ್ತೊಂದೆಡೆ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕರನ್ನು ಸನ್ಮಾನಿಸಿಗೌರವಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕಕಾಲಕ್ಕೆ ಸಮೀಕ್ಷೆ ಆರಂಭದ ಸಂದರ್ಭದಲ್ಲಿ ಲಾಗಿನ್, ನೆಟವರ್ಕ್, ರೂಟ್‌ಮ್ಯಾಪ್, ಮೊಬೈಲ್ ಹೀಗೆ ವಿವಿಧ ಸಮಸ್ಯೆಗಳಿಂದಾಗಿ ಸಮೀಕ್ಷೆ ಕಾರ್ಯ ವಿಳಂಬವಾಗಿತ್ತು. ಆದರೆ, ಸವದತ್ತಿ, ಅಥಣಿ, ಗೋಕಾಕ, ಚಿಕ್ಕೋಡಿ, ರಾಯಬಾಗ ಸೇರಿ ವಿವಿಧ ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ದಿನಕ್ಕೆ 12 ರಿಂದ 14 ಗಂಟೆಗಳ ಕಾರ್ಯನಿರ್ವಹಿಸಿ ತಮಗೆ ವಹಿಸಿದ 110 ರಿಂದ 125 ಮನೆಗಳ ಸಮೀಕ್ಷೆಯನುನ್ನು ಕೇವಲ ಒಂದೇ ವಾರದಲ್ಲಿ ಪೂರ್ಣಗೊಳಿಸಿದ್ದಾರೆ.
ಸಮೀಕ್ಷೆಗೊಳಿಸಿದ ಶಿಕ್ಷಕರಾದ ಎಂ.ಬಿ. ಅಸ್ಕಿ, ಎಸ್.ರುದ್ರಪ್ಪ, ಬಸಣ್ಣ ಪಾಟೀಲ, ಅಮೀನಸಾಬ್ ಎಂ.ಬಾಗವಾನ್, ಶೋಭಾ ಕೊಳಿ, ಅಮರ ಎಂ.ಪೂಜೇರ, ಹರೀಶ ಕಂಬಾಳೂರ, ಸಂಜಯ ಶಿರೋಳ, ಸೂರ್ಯಕಾಂತ ಪಾಟೀಲ, ದಾಸಣ್ಣಾ ಆರ್.ಎನ್., ಮುನಿರಾಜು ಎನ್.ಸಿ ಅವರು ಒಂದೇ ವಾರದಲ್ಲಿ ಸಮೀಕ್ಷೆ ಕಾರ್ಯ ಮುಗಿಸಿರುವುದು ಆಯಾ ತಾಲೂಕು ತಹಸೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಪಂ, ತಾಪಂ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದ್ದಾರೆ.
ಜಿಲ್ಲೆಯ ಒಟ್ಟು 11.85 ಲಕ್ಷ ಕುಟುಂಬಗಳ ಪೈಕಿ ಸೆ.29ರವರೆಗ ಬರೋಬ್ಬರ 3.20 ಲಕ್ಷ ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 9 ಸಾವಿರ ಶಿಕ್ಷಕರ ಪೈಕಿ 3 ಸಾವಿರ ಶಿಕ್ಷಕರು ಶೇ.70ರಷ್ಟು ಕಾರ್ಯ ಪೂರ್ಣಗೊಳಿಸಿದ್ದು, ಅಕ್ಟೋಬರ್ 1ರ ಒಳಗಾಗಿ ಸಮೀಕ್ಷೆ ಶೇ.100 ರಷ್ಟು ಪೂರ್ಣಗೊಳಿಸಲಿದ್ದಾರೆ. ಒಟ್ಟಿನಲ್ಲಿ ಅಕ್ಟೋಬರ್ 6ರ ಒಳಗಾಗಿ 11.85 ಲಕ್ಷ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಉದ್ದೇಶದಿಂದ ಪ್ರೌಢಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಸಮೀಕ್ಷೆ ಸವಾಬ್ದಾರಿ ನೀಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಸ್.ಟಿ.ಹರೀಶ ತಿಳಿಸಿದ್ದಾರೆ.