ತಿರಂಗಾ ಅಭಿಯಾನ ಬೆಂಬಲಿಸಿದ ಎಡನೀರು ಮಠಾಧೀಶರು

ed
Published on

ಬದಿಯಡ್ಕ: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರಧ್ವಜ (ಹರ್ ಘರ್ ತಿರಂಗಾ) ಆಂದೋಲನ ನಡೆಯುತ್ತಿದ್ದು, ಇದನ್ನು ಕಾಸರಗೋಡಿನ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳೂ ಬೆಂಬಲಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಧ್ವಜ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಎಲ್ಲರಿಗೂ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಇದೆ. ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರದಲ್ಲೂ ತಿರಂಗಾ ಚಿತ್ರ ಅಳವಡಿಸುವ ಕರೆಗೂ ಜನ ಸ್ಪಂದಿಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಎಡನೀರು ಮಠಾಧೀಶರು ತಮ್ಮ ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಪ್ರೊಫೈಲ್‌ನ ಭಾವಚಿತ್ರ ಬದಲಿಸಿ, ರಾಷ್ಟ್ರಧ್ವಜದ ಚಿತ್ರ ಅಳವಡಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದ ನೂರಾರು ಭಕ್ತರೂ ಪ್ರೊಫೈಲ್‌ಗಳಲ್ಲಿ ತಿರಂಗಾ ಮೂಡಿಸುತ್ತಿದ್ದಾರೆ.

ಎಡನೀರು ಮಠವೂ ಭಾರತದ ಸಂವಿಧಾನವೂ:
ಭಾರತದ ಸಂವಿಧಾನದೊಂದಿಗೆ ನಿಕಟ ಸಂಬಂಧ ಹೊಂದಿರುವ ಶ್ರೀಮದ್ ಎಡನೀರು ಮಠ ಭಾರತದ ಸಮಗ್ರ ರಾಷ್ಟ್ರೀಯತೆಯೊಂದಿಗೆ ಹಿಂದಿನಿಂದಲೇ ಸಂಪೂರ್ಣ ತೊಡಗಿಸಿಕೊಂಡ ವಿಶೇಷತೆಯುಳ್ಳ ಮಠ ಪರಂಪರೆ. ಭಾರತೀಯ ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಈ ಹಿಂದಿನ ಯತಿಗಳಾದ ಶ್ರೀ ಕೇಶವಾನಂದ ಸ್ವಾಮೀಜಿಯವರ ಹೆಸರು ಭಾರತದ ಕಾನೂನು ವ್ಯವಸ್ಥೆಯಲ್ಲಿ ಶಾಶ್ವತವಾಗಿ ದಾಖಲೆ ಸೇರಿದೆ. ಕೇಶವಾನಂದ ಭಾರತಿ ವಿರುದ್ಧದ ಕೇರಳ ಸರ್ಕಾರದ ಪ್ರಕರಣವು ಈಗಲೂ ಕಾನೂನು ವಿದ್ಯಾರ್ಥಿಗಳಿಗೆ ಪ್ರಮುಖ ಪ್ರಕರಣವಾಗಿ ಕಾರ್ಯನಿರ್ವಹಿಸುತ್ತದೆ.

ಈ ಪ್ರಕರಣವನ್ನು 13 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಅತಿದೊಡ್ಡ ಪೀಠದೊಂದಿಗೆ ಭಾರತೀಯ ಇತಿಹಾಸದಲ್ಲಿ ಅಪರೂಪದ ಪ್ರಕರಣ ಎಂದು ಕರೆಯಲಾಗಿದೆ. ವಾದ-ಪ್ರತಿವಾದ 68 ದಿನಗಳ ಕಾಲ ನಡೆದಿತ್ತು. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಹಕ್ಕು ಸಂಸತ್ತಿಗೆ ಇದೆ, ಆದರೆ ಸಂವಿಧಾನದ ಮೂಲ ರಚನೆಗೆ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂದು ತೀರ್ಪು ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net