

ಬದಿಯಡ್ಕ: ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀ ಸಚ್ಚಿದಾನಂದ ಭಾರತಿಯವರಿಗೆ ಸೋಮವಾರ ಕಂಚಿಯ ಜಗದ್ಗುರು ಪೀಠದಲ್ಲಿ ಸನ್ಯಾಸ ದೀಕ್ಷೆ ನೀಡಲಾಯಿತು.
ಕಂಚಿ ಕಾಮಕೋಟಿ ಮಹಾಸಂಸ್ಥಾನದಲ್ಲಿ ಭಾನುವಾರ ವಿವಿಧ ವಿಧಿ ವಿಧಾನಗಳು ಆರಂಭಗೊಂಡು ಗಣಪತಿ ದೇವರ ಸಂಪ್ರಾರ್ಥನೆ, ಪುಣ್ಯಾಹ ವಾಚನ, ಸಂಕಲ್ಪ, ಸಾಮವೇದ ಪಾರಾಯಣ, ಭಗವದ್ ಸಂಕೀರ್ತನೆಗಳು ನೆರವೇರಿತು. ಸೋಮವಾರ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಅವರಿಂದ ಶ್ರೀ ಸಚ್ಚಿದಾನಂದ ಭಾರತಿಯವರು ಶಾಸ್ತ್ರೋಕ್ತವಾಗಿ ದೀಕ್ಷೆ ಸ್ವೀಕರಿಸಿದರು.
ಪ್ರಾತಃಕಾಲದಲ್ಲಿ ಅನುಷ್ಠಾ ಸಹಿತ, ವಿರಜಾ ಹೋಮ, ಪುರುಷ ಸೂಕ್ತ ಹೋಮ, ಸನ್ಯಾಸ ದೀಕ್ಷೆ, ಗುರುಪೂಜೆ, ಗುರು ಪಾದುಕಾಪೂಜೆ, ಮಂತ್ರೋಪದೇಶ, ಕಂಚಿ ಮಠಾಧೀಶರಿಂದ ಮಂಗಳ ಮಂತ್ರಾಕ್ಷತೆ ನೆರವೇರಿತು.
ಇಂದು ಪುರಪ್ರವೇಶ: ಅ.27ರಂದು ಬೆಳಗ್ಗೆ 11ರಿಂದ 12ರ ಮಧ್ಯೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರಪ್ರವೇಶಗೈಯ್ಯಲಿದ್ದು ಅ.28ರಂದು ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವರು. ಕೋವಿಡ್ -19 ಮಾನದಂಡಗಳ ಅನುಸಾರ ಸೀಮಿತ ಸಂಖ್ಯೆಯಲ್ಲಿ ಪೀಠಾರೋಹಣ ಕಾರ್ಯಕ್ರಮಗಳಿಗೆ ಪ್ರವೇಶಾವಕಾಶ ನೀಡಲಾಗಿದೆ. ವಿವಿಧ ಮಠಾಧಿಪತಿಗಳು, ಸಾಧು-ಸಂತರು, ಗಣ್ಯರು ಭಾಗವಹಿಸುವರೆಂದು ಮಠದ ಪ್ರಕಟಣೆ ತಿಳಿಸಿದೆ.