ಎಡನೀರು ನೂತನ ಮಠಾಧೀಶರಿಗೆ 28ರಂದು ಕಾಂಚಿ ಶ್ರೀಗಳಿಂದ ದೀಕ್ಷೆ

Untitled-1
Published on

ಬದಿಯಡ್ಕ: ಎಡನೀರು ಮಠದ ನೂತನ ಯತಿವರ್ಯ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳ ಪೀಠಾರೋಹಣ ಅಕ್ಟೋಬರ್ 1ರಂದು ನಡೆಯಲಿದೆ. ಇದಕ್ಕೂ ಮೊದಲು ಸೆ.28ರಂದು ಕಾಂಚಿ ಕಾಮಕೋಟಿ ಜಗದ್ಗುರು ಶ್ರೀವಿಜಯೇಂದ್ರ ಸರಸ್ವತಿ ಶ್ರೀಗಳಿಂದ ಸನ್ಯಾಸ ದೀಕ್ಷೆ ನೆರವೇರಲಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಟಿ.ಶಾಮ ಭಟ್ ಅಧ್ಯಕ್ಷತೆಯಲ್ಲಿ ಮಂಗಳವಾರ ಮಠದಲ್ಲಿ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಪೀಠಾರೋಹಣ ಪೂರ್ವಭಾವಿಯಾಗಿ ಶ್ರೀಗಳ ಪುಣ್ಯ ಕ್ಷೇತ್ರ ಸಂದರ್ಶನ ಸೆ.19ರಂದು ಅಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಕುಂಬಳೆ ಸೀಮೆಯ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಕಾಂಚಿ ಕಾಮಕೋಟಿ ಜಗದ್ಗುರು ಪೀಠದಲ್ಲಿ ಸಂಪನ್ನಗೊಳ್ಳಲಿದೆ. ಅಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮರಳುವ ಸಚ್ಚಿದಾನಂದ ತೀರ್ಥರ ಪುರಪ್ರವೇಶ ಹಾಗೂ ಪೀಠಾರೋಹಣ ಕಾರ್ಯಕ್ರಮ ಅ.1ರಂದು ನಡೆಯಲಿದೆ.

ಆರಾಧನೆ ಹಾಗೂ ಪೀಠಾರೋಹಣ ಕಾರ್ಯಕ್ರಮಗಳ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ಎಲ್ಲ ವೈದಿಕ ವಿಧಾನಗಳನ್ನು ನಿರ್ವಹಿಸಲು ನಿರ್ಧರಿಸಲಾಯಿತು.

ನಿಯೋಜಿತ ಮಠಾಧಿಪತಿ ಶ್ರೀಸಚ್ಚಿದಾನಂದ ಭಾರತಿ, ಮಲ್ಲ ಶ್ರೀಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಡಾ.ಬಿ.ಎಸ್.ರಾವ್, ವಿದ್ವಾನ್ ಪಂಜ ಭಾಸ್ಕರ ಭಟ್, ಪ್ರಕಾಶ್ ರೆಡ್ಡಿ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಸೂರ್ಯನಾರಾಯಣ ಎಡನೀರು ಸ್ವಾಗತಿಸಿ, ನಿರೂಪಿಸಿದರು. ರಾಜೇಂದ್ರ ಕಲ್ಲೂರಾಯ ವಂದಿಸಿದರು.

15, 16ರಂದು ಪ್ರಥಮ ಆರಾಧನೆ

ಬ್ರಹ್ಮೈಕ್ಯರಾದ ಎಡನೀರು ಶ್ರೀಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನೆ ಸೆ.15 ಮತ್ತು 16ರಂದು ಮಠದ ಪರಿಸರದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net