ಎಡನೀರು ಮಠದ ಕೊಡುಗೆ ಅಪಾರ, ಶ್ರೀ ಭಾರತೀ ವಿಜಯೇಂದ್ರ ಸರಸ್ವತೀ ಶ್ರೀ ಆಶೀರ್ವಚನ

edaneeru
Published on

ಬದಿಯಡ್ಕ: ದ್ವಾದಶಿ ಮತ್ತು ಪ್ರದೋಷ ಸಂಯೋಗ ಕಾಲದಲ್ಲಿ ಎಡನೀರು ಮಠದ ನೂತನ ಯತಿಗಳಾಗಿ ಪೀಠಾರೋಹಣಗೈದಿರುವುದು ವಿಶೇಷವಾದುದು. ನದಿ ಸಂಗಮದಂತೆ ಕಾಸರಗೋಡು ಬಹುಭಾಷೆಗಳ ಸಂಗಮ ನೆಲ. ಇಂತಹ ವಿಶೇಷ ನೆಲದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಧೀಶಕ್ತಿಯ ಕೇಂದ್ರವಾಗಿ ಎಡನೀರು ಮಠದ ಕೊಡುಗೆ ಅಪಾರವಾದುದು ಎಂದು ಕಾಂಚಿ ಜಗದ್ಗುರು ಶ್ರೀ ಭಾರತಿ ವಿಜಯೇಂದ್ರ ಸರಸ್ವತಿ ಶ್ರೀಗಳು ಆಶೀರ್ವಚನದಲ್ಲಿ ಹೇಳಿದರು.

ಎಡನೀರು ಮಠದ ನೂತನ ಯತಿಗಳಾಗಿ ದೀಕ್ಷೆ ಸ್ವೀಕರಿಸಿದ ಶ್ರೀ ಸಚ್ಚಿದಾನಂದ ಭಾರತಿಗಳ ಬುಧವಾರ ನಡೆದ ಪೀಠಾರೋಹಣ ಕಾರ್ಯಕ್ರಮದಂಗವಾಗಿ ಅಪರಾಹ್ನ ಧಾರ್ಮಿಕ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅನುಗ್ರಹ ಸಂದೇಶದಲ್ಲಿ ಮಾತನಾಡಿದರು.

ಕಾಂಚಿ ಮತ್ತು ಎಡನೀರು ಮಠಕ್ಕೆ ಸುದೀರ್ಘ ಕಾಲದ ಸಂಬಂಧ ಇದೆ. ಧರ್ಮ ಪ್ರಚಾರದಲ್ಲಿ ಮಹತ್ತರ ಕೊಡುಗೆ ಶ್ರೀಮಠದ್ದು. ದೇಶದ ವಿಕಾಸಕ್ಕೆ ಸಂಸ್ಕೃತಿ, ಸಂಸ್ಕೃತ ಭಾಷೆ, ವೇದ-ಪುರಾಣಗಳು ಬೇಕು. ಶಾಸ್ತ್ರ, ಧರ್ಮಾಚರಣೆ, ಶಾಂತಿ ನೆಮ್ಮದಿಯ ಜೀವನ ಭಾರತದ ಹೃದಯವಾಗಿದೆ. ಹೊಸ ತಲೆಮಾರಿಗೆ ಈ ಬಗ್ಗೆ ಜಾಗೃತಿ, ಬೋಧನೆ ಮೂಡಿಸುವ ಹೊಣೆಗಳನ್ನು ಮಠ- ಮಂದಿರಗಳ ಮೂಲಕ ಬಲಗೊಳಿಸಬೇಕು ಎಂದರು.

ಕರ್ನಾಟಕ ಸರ್ಕಾರದ ಲೋಕಸೇವಾ ಆಯೋಗದ ನಿವೃತ್ತ ಆಯುಕ್ತ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಪಾದಂಗಳು, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಸಂಸದ ರಾಜಮೋಹನ ಉಣ್ಣಿತ್ತಾನ್, ಮಾಜಿ ಸಚಿವ ರಮಾನಾಥ ರೈ, ಜಿಪಂ ಸದಸ್ಯ ವಕೀಲ ಕೆ.ಶ್ರೀಕಾಂತ್, ಮಠದ ಪ್ರಧಾನ ತಂತ್ರಿ ಉಚ್ಚಿಲ ಪದ್ಮನಾಭ ತಂತ್ರಿ, ವೈದಿಕ ವಿದ್ವಾಂಸ ಶ್ರೀ ಚಕ್ರಪಾಣಿದೇವ ಪೂಜಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಯೋಗೀಶ ಶರ್ಮ ಬಳ್ಳಪದವು ಪ್ರಾರ್ಥಿಸಿ, ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಕೈಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net