ಬಳ್ಳಾರಿ : ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಪ್ತ ಕುರುಬ ನಾಗರಾಜ ಅವರ ಇಲ್ಲಿನ ಬಸವೇಶ್ವರ ಕಾಲನಿಯಲ್ಲಿನ ಮನೆಯ ಮೇಲೆ ಜಾರಿ ನಿರ್ದೇಶನಾಲಯ ( ಇಡಿ ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.
ಶಾಸಕ ಬಿ. ನಾಗೇಂದ್ರ ಅವರ ಗಣಿ ಗುತ್ತಿಗೆ ಟ್ರಾನ್ಸ್ ಪೋರ್ಟ್ ಹಾಗೂ ಈಗಲ್ ಕಂಪನಿಯ ಮೇಲು ಉಸ್ತುವಾರಿ ನಾಗರಾಜ ವಹಿಸಿಕೊಂಡಿದ್ದರು. ಅಲ್ಲದೆ, ನಾಗೇಂದ್ರ ಜಿಲ್ಲಾ ಉಸ್ತುವಾರಿ ಸಚಿವರಾದ ವೇಳೆ ಕೆಲವೊಂದು ವ್ಯವಹಾರಕ್ಕೆ ಸಂಬಂಧಿಸಿದ ಜವಾಬ್ದಾರಿ ಹೊತ್ತಿದ್ದರು. ಈಚೆಗೆ ನಡೆದ ನಾಗೇಂದ್ರ ಹುಟ್ಟಹಬ್ಬದ ವೇಳೆ ನಾಗರಾಜ ನೇತೃತ್ವದಲ್ಲಿಯೇ ನಾನಾ ಕಡೆ ಕಾರ್ಯಕ್ರಮ ನಡೆದವು. ಸದ್ಯ, ನಾಗರಾಜ ಬೆಂಗಳೂರಿನಲ್ಲಿದ್ದು, ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳು ಪರಿಶೀಲಿಸಿದ್ದಾರೆ. ಬೇಲಿಕೇರು ಅದಿರು ನಾಪತ್ತೆ ಪ್ರಕರಣ ಸಂಬಂಧಿಸಿದ ದಾಳಿ ಎನ್ನಲಾಗಿದೆ.
ನಾಗೇಂದ್ರ ಗೆ ಶಾಕ್ : ಕಳೆದ ತಿಂಗಳು ಸೆ.15 ರಂದು ಶಾಸಕ ಬಿ. ನಾಗೇಂದ್ರ ಹುಟ್ಟುಹಬ್ಬದ ದಿನದಂದೇ ಪಾಲಿಕೆಯ ಸದಸ್ಯ ಗೋವಿಂದ ರಾಜು ಮನೆ ಮೇಲೆ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಗೋವಿಂದರಾಜು ಮನೆಯನ್ನು ನಾಗೇಂದ್ರ ಖರೀದಿಸಿದ ಹಿನ್ನೆಲೆ ಹಣ ವ್ಯವಹಾರ ನಡೆದಿದೆ ಎಂಬುದಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದಡಿ ಸಿಬಿಐ ದಾಳಿ ನಡೆಸಿ ಶಾಕ್ ನೀಡಿತ್ತು.