ವಿಚಾರಣೆ ನೆಪದಲ್ಲಿ ವಿಪಕ್ಷದ ನಾಯಕರಿಗೆ ಕಿರುಕುಳ: ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ ಆರೋಪ

22CBPcongress1
Published on

ಚಿಕ್ಕಬಳ್ಳಾಪುರ: ಕೇಂದ್ರ ತನಿಖಾ ಸಂಸ್ಥೆಗಳು ಆಡಳಿತ ವ್ಯವಸ್ಥೆಯ ಕೈಗೊಂಬೆಗಳಾಗಿ ವಿಚಾರಣೆಯ ನೆಪದಲ್ಲಿ ವಿಪಕ್ಷದ ನಾಯಕರಿಗೆ ದುರುದ್ದೇಶದಿಂದ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟಿಸಿತು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಬ್ರಿಟಿಷರ ಕ್ಷಮೆ ಕೇಳಿದ ಸಂತತಿಯಲ್ಲ, ಬ್ರಿಟಿಷರನ್ನು ದೇಶದಿಂದ ಓಡಿಸಿದ ಸಂತತಿ, ಕಾಂಗ್ರೆಸ್ ನಾಯಕರ ತೇಜೋವಧೆಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಗೆ ಧಿಕ್ಕಾರ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.


ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ ಮಾತನಾಡಿ, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಕಾಂಗ್ರೆಸ್ ನಾಯಕರಿಗೆ ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯವು ಸುಧೀರ್ಘ ವಿಚಾರಣೆ ನಡೆಸಿದೆ. ಇದೇ ಮಾದರಿಯಲ್ಲಿ ಆಡಳಿತ ಪಕ್ಷದ ನಾಯಕರಿಗೆ ಸಂಬಂಧಿಸಿದಂತೆ ಪ್ರಕರಣಗಳ ವಿಚಾರದಲ್ಲೂ ನಡೆದುಕೊಳ್ಳಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.


ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಚ್ಛೆದಿನ್ ಸೇರಿದಂತೆ ಪ್ರಧಾನಿ ಮೋದಿ ನೀಡಿದ ಭರವಸೆಗಳು ಈಡೇರಿಲ್ಲ. ಇದಕ್ಕೆ ವ್ಯಾಪಕವಾಗಿ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ದಿಕ್ಕು ತಪ್ಪಿಸಲು, ವಿಪಕ್ಷಗಳ ಬಾಯಿ ಮುಚ್ಚಿಸಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಹಿಂದು ಮಹಾಸಭಾ, ಆರ್‌ಎಸ್‌ಎಸ್‌ನವರು ಈ ಹಿಂದೆ ಮುಸ್ಲಿಂ ಲೀಗ್ ಜತೆ ಸೇರಿ ಸರ್ಕಾರ ಸಹ ರಚಿಸಿದ್ದಾರೆ. ಹೆಡಗೇವಾರ್ ಬ್ರಿಟಿಷ್ ಸೇನೆ ಸೇರಿಸಿಕೊಳ್ಳಿ ಎಂದಿದ್ದರು. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟಿದ್ದರು. ಇಂತಹವರು ಬಿಜೆಪಿಯವರ ಪೂರ್ವಜರು ಎಂದು ಟೀಕಿಸಿದರು.
ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ , ಶಾಸಕರಾದ ವಿ.ಮುನಿಯಪ್ಪ, ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನಸೂಯಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಮುಖಂಡರಾದ ಯಲುವಳ್ಳಿ ರಮೇಶ್, ನಂದಿ ಆಂಜನಪ್ಪ, ಮಮತಾ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net