

ಮೈಸೂರು: ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳನ್ನು ಕೇವಲ ಪಠ್ಯದೊಳಗೆ ಮುಳುಗಿಸಿ ಇತರ ಚಟುವಟಿಕೆಗಳಿಂದ ದೂರವಿಡುವ ಮೂಲಕ ಸಂತೋಷ ಕಸಿದುಕೊಳ್ಳಲಾಗುತ್ತಿದೆ ಎಂದು ಮನೋತಜ್ಞ ಪ್ರೊ.ಎಂ.ಶ್ರೀಧರ ಮೂರ್ತಿ ಹೇಳಿದರು.
ಬೆಂಗಳೂರಿನ ಯುವ ಚಿಂತನ ಪ್ರತಿಷ್ಠಾನದಿಂದ ನಗರದ ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 2022-23ನೇ ಸಾಲಿನ ಇಕೋಸಿಸ್ಟಮ್ ವರ್ಷದ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಬಾಲ್ಯ ಅಮೂಲ್ಯವಾದದ್ದು. ಒಂದು ಬಾರಿ ಅದು ಕಳೆದು ಹೋದರೆ ಮತ್ತೆ ಸಿಗುವುದಿಲ್ಲ. ಬಾಲ್ಯದಲ್ಲಿ ಚಿಣ್ಣಾಟವಾಡಿಕೊಂಡು ಮಕ್ಕಳು ಬೆಳೆಯಬೇಕು. ಆದರೆ, ಇಂದು ಮಕ್ಕಳಾಗಿ ಬದುಕಲು ಮಕ್ಕಳಿಗೆ ಸಾಧ್ಯವಿಲ್ಲದಂತಾಗಿದೆ. ಪಾಲಕರು ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ. ಆಟೋಟಗಳಲ್ಲಿ ಭಾಗವಹಿಸಲು ಬಿಡದೆ ಕೇವಲ ಓದಿನಲ್ಲೇ ಮುಳುಗಿಸುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕರಾದ ಡಿ.ಬಿ.ಗುರುಸ್ವಾಮಿ, ರೋಶನ್ ಅರಾ ಬೇಗಮ್, ತಾಹಿರ ಬಾನು, ಸಿರಾಜ್ ಉರ್ ರಹಮಾನ್, ಸಿ.ಎಚ್.ಸ್ವಾಮಿ, ಬಿ.ವಿ.ಕಿರಣ್, ಸ್ವರ್ಣವತಿ, ಕೆ.ಬಿ.ಕಾವ್ಯಾ, ನಂಜೇಗೌಡ, ಆರ್.ಬಿಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಜಿಲ್ಲಾ ಸಮನ್ವಯಾಧಿಕಾರಿ ಹೇಮಂತ್‌ಕುಮಾರ್, ಅತ್ತಿಗೋಡು ಸರ್ಕಾರಿ ಶಾಲೆಯ ಉಪ ಪ್ರಾಂಶುಪಾಲ ನಾಗಶೆಟ್ಟಿ, ಯುವ ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸಿ.ಎ.ಗೌಡ, ಪ್ರತಿಷ್ಠಾನದ ಸುಷ್ಮಾ, ಮದನ್ ಮೋಹನ್, ಈಶ್ವರ್, ರಂಜಿತಾ ಇದ್ದರು.