ಸಾಲ ಮರುಪಾವತಿಯಿಂದ ಆರ್ಥಿಕ ಪ್ರಗತಿ

SIRSI MEETING
Published on

ಶಿರಸಿ: ಸಹಕಾರಿ ಸಂಘಗಳು ಸಾಲ ಕೊಡುತ್ತವೆ ಎಂಬ ಕಾರಣಕ್ಕೆ ಸಾಲ ಪಡೆಯಬಾರದು. ನಮ್ಮ ಅಗತ್ಯತೆಗೆ ಅನುಗುಣವಾಗಿ ಸಾಲ ಪಡೆದು ಮರುಪಾವತಿ ಮಾಡಿದರೆ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಟಿಆರ್​ಸಿ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

ನಗರದಲ್ಲಿ ಗುರುವಾರ ಕರೆಯಲಾಗಿದ್ದ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿ (ಟಿಆರ್​ಸಿ) ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ರೈತ ಸದಸ್ಯರು ಸಾಲದ ಪ್ರಮಾಣ ಕಡಿಮೆ ಮಾಡಿಕೊಂಡು ತಮ್ಮ ಕೃಷಿ ಉತ್ಪನ್ನಕ್ಕೆ ಪೂರಕವಾಗಿ ಆರ್ಥಿಕ ಶಿಸ್ತಿನಿಂದ ಇತಿಮಿತಿಯಲ್ಲಿ ವ್ಯವಹಾರ ಮಾಡಿ ಜೀವನ ನಡೆಸಬೇಕು. ಸಂಸ್ಥೆ ಕಳೆದ ಮಾರ್ಚ್ ಅಂತ್ಯಕ್ಕೆ 122 ಕೋಟಿ ರೂ.ಗಳಿಗೂ ಅಧಿಕ ಸಾಲ ವಿತರಿಸಿದ್ದು, ಸಾಲ ವಸೂಲಿ ಪ್ರಮಾಣ ಶೇ. 99.83ರಷ್ಟಾಗಿದೆ ಎಂದರು.

ಸಂಸ್ಥೆಯು ಪತ್ತು ಮಾರಾಟ ಜೋಡಣೆಯಲ್ಲಿ 59 ಕೋಟಿ ರೂ. ಮೊತ್ತದ ಕೃಷಿ ಉತ್ಪನ್ನಗಳನ್ನು ವಿಕ್ರಿ ಮಾಡಿದ್ದೇವೆ. ಇದು ದಾಖಲೆಯೂ ಹೌದು. ಇದನ್ನು ಮುಂಬರುವ ವರ್ಷದಲ್ಲಿ 100 ಕೋಟಿ ರೂ.ಗಳಿಗೆ ಹೆಚ್ಚಾಗಬೇಕು. ರೈತರ ವಿಕ್ರಿಯಾದ ಉತ್ಪನ್ನದ ಆದಾಯದಲ್ಲಿ ಕಡ್ಡಾಯ ಠೇವು ಮುರಿದುಕೊಳ್ಳುತ್ತಿದ್ದು, ಅದಕ್ಕೆ ಶೇ.8.5 ಬಡ್ಡಿ ದರ ನೀಡಬೇಕು ಎಂದು ಯೋಚಿಸಿದ್ದೇವೆ. ಸಂಸ್ಥೆ ಈ ಬಾರಿ ಶೇರು ಸದಸ್ಯರಿಗೆ ಶೇ. 5ರಷ್ಟು ಡಿವಿಡೆಂಡ್ ನೀಡುತ್ತಿದೆ. ಶೇರುದಾರರ ಪ್ರಮಾಣ ಜಾಸ್ತಿ ಇರುವುದರಿಂದ ಇಷ್ಟೇ ಪ್ರಮಾಣದಲ್ಲಿ ನೀಡುತ್ತಿದ್ದೇವೆ. ಹೀಗೆ ನೀಡುವ ಮೊತ್ತವೇ 53.3 ಲಕ್ಷ ರೂ. ಆಗುತ್ತಿದೆ ಎಂದರು.

ರೈತ ಸದಸ್ಯರ ಮಕ್ಕಳಿಗೆ ಶಿಕ್ಷಣ ಸಾಲ ನೀಡುತ್ತಿದ್ದೇವೆ. ಇದರ ಜವಾಬ್ದಾರಿ ಪಾಲಕರದ್ದೇ ಆಗಿದೆ. ಒಟ್ಟು 27 ಜನರಿಗೆ 1.97 ಕೋಟಿ ರೂ. ಗಳ ಸಾಲ ಕೊಡಲಾಗಿದೆ ಎಂದರು.

ಉಪಾಧ್ಯಕ್ಷ ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ, ನಿರ್ದೇಶಕರಾದ ಆರ್.ವಿ. ಹೆಗಡೆ ಚಿಪಗಿ, ವಿಶ್ವನಾಥ ಜಿ. ಹೆಗಡೆ ಸೋಮ್ನಳ್ಳಿ, ಗಣಪತಿ ಎಸ್. ರಾಯಸದ, ಸುಬ್ರಾಯ ಎನ್. ಹೆಗಡೆ ಹಾವಳಿಮನೆ, ಶಿವಾನಂದ ಜಿ. ಭಟ್ಟ ನಿಡಗೋಡ, ವಿಘ್ನೕಶ್ವರ ಆರ್. ಹೆಗಡೆ ಅಗ್ಸಾಲಕಿಬ್ಬಳ್ಳಿ, ಈರಾ ಎನ್. ಗೌಡ ಕಳವೆ, ಕಲ್ಪನಾ ಎಸ್. ಕೊಪ್ಪಳ್ಳ ಬೇಣದಮನೆ, ಇಂದಿರಾ ವೆಂ. ಹೆಗಡೆ ಬಾಳೆಕೊಪ್ಪ ಇತರರಿದ್ದರು.

ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಕಿರಣ ಎಸ್. ಭಟ್ಟ ಮಾವಿನಕೊಪ್ಪ ವರದಿ ಮಂಡಿಸಿದರು. ಜಿ.ಜಿ. ಹೆಗಡೆ ಕುರವಣಿಗೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net