ಆರ್ಥಿಕ, ಸಾಮಾಜಿಕ ಅಸಮಾನತೆ ಉಲ್ಬಣ

sainath
Published on

ಮಂಗಳೂರು: ದೇಶದಲ್ಲಿ ಸುಮಾರು 30 ವರ್ಷಗಳಿಂದ ಬೆಳೆದು ಬಂದ ಆರ್ಥಿಕ ಅಸಮಾನತೆ ಕಳೆದ 6 ವರ್ಷಗಳಲ್ಲಿ ಮತ್ತಷ್ಟು ಉಲ್ಭಣಿಸಿದೆ. ನೋಟು ಅಮಾನ್ಯ, ಜಿಎಸ್‌ಟಿ, ಗೋಹತ್ಯೆ ನಿಷೇಧ ಮತ್ತಿತರ ಘಟನೆಗಳಿಂದ ಜನಸಾಮಾನ್ಯರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ರೈತರ ಆತ್ಮಹತ್ಯೆ ಸಂಖ್ಯೆ, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಶುಕ್ರವಾರ ಆಯೋಜಿಸಿದ 10ನೇ ವರ್ಷದ ಮಾಧ್ಯಮ ಉತ್ಸವ ‘ಮೀಡಿಯಾ ಮಂಥನ್-2020’ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ನಿವಾರಣೆಯಾಗದೆ ಪಡೆಯುವ ರಾಜಕೀಯ ಸ್ವಾತಂತ್ರೃ ಅರ್ಥಹೀನ. ದೇಶದ ಗ್ರಾಮೀಣ ಪ್ರದೇಶದಲ್ಲಿ ಬುಲೆಟ್ ಟ್ರೈನ್, ವಿಶೇಷ ವಿತ್ತವಲಯ(ಎಸ್‌ಇಝಡ್) ಸಹಿತ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಹಸಿರು ಭೂಮಿಯ ಕಬಳಿಕೆ ನಿರಂತರ ನಡೆದಿದೆ. ಯೋಜನೆ ವಿರೋಧಿಸಿದ ರೈತರ ಮೇಲೆ ಕೇಸುಗಳನ್ನು ಹಾಕಲಾಯಿತು. ಇರುವ ಉದ್ಯೋಗ ನಷ್ಟವಾಗುತ್ತಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎಂದರು.

ದೇಶದಲ್ಲಿ ಕೃಷಿ ಕ್ಷೇತ್ರ ಹಿಂದಿಗಿಂತಲೂ ಹೆಚ್ಚಿನ ಬಿಕ್ಕಟ್ಟನ್ನು ಇಂದು ಎದುರಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.75ರಷ್ಟು ಜನರು ತಿಂಗಳಿಗೆ 5 ಸಾವಿರ ರೂಪಾಯಿಗೂ ಕಡಿಮೆ ದುಡಿಮೆಯಲ್ಲಿ ಬದುಕುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ 3,15,000 ಜನ ರೈತರು ಆತ್ಮ ಹತ್ಯೆಮಾಡಿಕೊಂಡಿದ್ದಾರೆ. 15 ದಶಲಕ್ಷ ಮಂದಿ ಕೃಷಿ ತೊರೆದಿದ್ದಾರೆ ಎಂದರು.

ಒಂದು ಧರ್ಮದವರನ್ನು ಹೊರತು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತಿರುವುದು ದೇಶದ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಈ ಮೂಲಕ ದೇಶದ ಜಾತ್ಯತೀತ ಸ್ವರೂಪ, ಬಹು ಸಂಸ್ಕೃತಿಯನ್ನು ಎತ್ತಿಹಿಡಿದ ಸಂವಿಧಾನವನ್ನು ತಿರಸ್ಕರಿಸುವ ಪ್ರಯತ್ನ ನಡೆದಿದೆ ಎಂದು ಆಕ್ಷೇಪಿಸಿದರು. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡಯೋನಿಸಿಯಸ್, ಪ್ರಿನ್ಸಿಪಾಲ್ ವಂ.ಪ್ರವೀಣ್ ಮಾರ್ಟಿಸ್, ಅಲೋಶಿಯಸ್ ಕಾಲೇಜು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಮೆಲ್ವಿನ್ ಪಿಂಟೋ, ಕಾರ್ಯಕ್ರಮ ಸಂಚಾಲಕರಾದ ದೇಶಿಶ್ರೀ ಶೆಟ್ಟಿ, ಹರ್ಷಿತಾ ವರ್ಗೀಸ್, ವೈಶಾಲಿ ಪುತ್ರನ್ ಉಪಸ್ಥಿತರಿದ್ದರು.

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟ ದೇಶದ ಸಂವಿಧಾನ ಉಳಿಸುವ ದಿಕ್ಕಿನಲ್ಲಿ ಏಕತೆಯ ಹೋರಾಟವಾಗಿದೆ. ಸ್ವಾತಂತ್ರೃ, ಸಮಾನತೆ, ಭ್ರಾತೃತ್ವ ಸಂವಿಧಾನದ ಮೂಲ ಆಶಯ. ಸ್ವಾತಂತ್ರೃದ ಸಂದರ್ಭ ದೇಶದ ಸಂವಿಧಾನ, ತ್ರಿವರ್ಣ ಧ್ವಜ, ರವೀಂದ್ರನಾಥ ಟಾಗೂರ್ ರಚಿಸಿದ ಜನಗಣಮನ ಹಾಡಿನ ಬಗ್ಗೆ ಆಕ್ಷೇಪಿಸಿ ಅದನ್ನು ಬದಲಾಯಿಸಲು ಯತ್ನಿಸಿದ ಶಕ್ತಿಗಳೇ ಇಂದು ದೇಶದ ಸಂವಿಧಾನ ಬದಲಾವಣೆ ಪ್ರಯತ್ನ ನಡೆಸುತ್ತಿವೆ. - ಪಿ.ಸಾಯಿನಾಥ್, ಹಿರಿಯ ಪತ್ರಕರ್ತ

ರೈತರ ಹೆಸರಲ್ಲಿ ಕಾರ್ಪೋರೇಟ್ ಕಂಪನಿ ಪರ ಯೋಜನೆ ಕುಂದಾಪುರ: ರೈತರ ಹೆಸರಿನ ಎಲ್ಲ ಯೋಜನೆ, ಸೌಲಭ್ಯ ಕಾರ್ಪೋರೇಟ್ ವರ್ಗದ ಹಿತ ಕಾಯುತ್ತಿದ್ದು, ಇದರಿಂದ ರೈತ ಬಡವಾಗುತ್ತಿದ್ದಾನೆ. ಸಬ್ಸಿಡಿ ರೈತರ ನೆರವಿಗೆ ಬಾರದೆ ಸರ್ಕಾರಗಳು ಮಾರಾಟಗಾರರಿಗೆ ನೀಡುವ ಸೌಲಭ್ಯವಾಗಿದೆ ಎಂದು ಸಾಯಿನಾಥ್ ಅಭಿಪ್ರಾಯಪಟ್ಟರು. ತಲ್ಲೂರು ಫ್ಯಾಮಿಲಿ ಟ್ರಸ್ಟ್, ಸಮುದಾಯ ಕುಂದಾಪುರ ಆಶ್ರಯದಲ್ಲಿ ಶುಕ್ರವಾರ ಕುಂದಾಪುರ ಪದವಿಪೂರ್ವ ಕಾಲೇಜು ಕಲಾಮಂದಿರಲ್ಲಿ ಕಾರ್ಪೊರೇಟ್ ಫಾರ್ಮಿಂಗ್ ಮತ್ತು ಭಾರತ ಕೃಷಿ ಬಿಕ್ಕಟ್ಟು ಬಗ್ಗೆ ಉಪನ್ಯಾಸ ನೀಡಿದರು.

ಅಮೆರಿಕದಲ್ಲಿ ಪ್ರತಿದಿನ ಹಸುವಿಗೆ 3 ಡಾಲರ್ ಸಬ್ಸಿಡಿ ನೀಡಕಾಗುತ್ತದೆ. ಭಾರತೀಯ ರೈತರಿಗೆ ಇಷ್ಟು ಸಬ್ಸಿಡಿ ಸಿಗುವುದು ತಿಂಗಳಿಗೆ. ಶೇ.10 ಸಬ್ಸಿಡಿಯಲ್ಲಿ ಶೇ.7 ಕಾರ್ಪೋರೇಟ್ ವಲಯಕ್ಕೆ ಹೋಗುತ್ತದೆ. ಸಿನಿಮಾ ನಟರು ಕೂಡ ರೈತರ ಸಬ್ಸಿಡಿ ಫಲಾನುಭವಿಗಳು. ಭಾರತೀಯ ರೈತರ ಸ್ಥಿತಿ ಅಮೆರಿಕ ಹಸುವಿಗಿಂತ ಕನಿಷ್ಠ ಎಂದು ರೈತರ ಬದುಕನ್ನು ವಿಶ್ಲೇಷಿಸಿದರು.

ರೈತರು ಬೆಳೆದ ಆಹಾರ ಪದಾರ್ಥಗಳು ತಾಜಾವಾಗಿದ್ದು, ಕಂಪನಿಗಳು ಶುದ್ಧ ಆಹಾರದ ಹೆಸರಲ್ಲಿ ವಿಷ ಉಣಿಸುತ್ತಿವೆ. ಯಾವುದೇ ಕಂಪನಿ ಶುದ್ಧ ಆಹಾರ ನೀಡುವುದಿಲ್ಲ. ಎಲ್ಲವೂ ಕಾರ್ಪೋರೇಟ್ ಹಿಡಿತದಲ್ಲಿದೆ. ಭಾರತದ ಕೃಷಿಕರಿಗೆ ಜಮೀನು ಹೊರತುಪಡಿಸಿದರೆ ಬೇರೆ ಯಾವುದರ ಮೇಲೂ ನಿಯಂತ್ರಣವಿಲ್ಲ. ಬೀಜ, ಗೊಬ್ಬರ, ನೀರು, ಮಾರುಕಟ್ಟೆ, ಸಾರಿಗೆ ಎಲ್ಲವೂ ಕಾರ್ಪೋರೇಟ್ ಕಂಪನಿಗಳ ಹಿಡಿತದಲ್ಲಿದೆ. ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಆಳುತ್ತಿರುವ ಕಾರ್ಪೋರೇಟ್ ಕಂಪನಿಗಳು ದೇಶದ ಕೃಷಿ ಕ್ಷೇತ್ರವನ್ನು ಹೈಜಾಕ್ ಮಾಡಿವೆ. ಬೇರೆ ಬೇರೆ ಕ್ಷೇತ್ರದ ಸ್ವಉದ್ಯೋಗಿಗಳು ಅವರ ಶ್ರಮಕ್ಕೆ ಬೆಲೆ ಕಟ್ಟಲು ಅವಕಾಶವಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಕೃಷಿಕನ ಆ ಹಕ್ಕನ್ನು ಕಸಿದುಕೊಂಡಿರುವ ಕಂಪನಿಗಳೇ ಬೆಲೆ ನಿರ್ಧಾರ ಮಾಡುತ್ತಿವೆ ಎಂದು ವಿಶ್ಲೇಷಿಸಿದರು.

ನೋಟು ಅಮಾನ್ಯ ಪ್ರಕ್ರಿಯೆ ಹಾಗೂ ಜಿಎಸ್‌ಟಿ ಎಂದೂ ರೈತರ ಪರವಾಗಿಲ್ಲ. ನೈಸರ್ಗಿಕ ಹಾಗೂ ಜೈವಿಕ ಗೊಬ್ಬರಗಳಲ್ಲಿ ಕಾಣುವ ಫಲವತ್ತತೆ ಕೃತಕ ಗೊಬ್ಬರಗಳಲ್ಲಿ ಕಾಣುತ್ತಿಲ್ಲ. ರೈತರ ಪರವಾಗಿರಬೇಕಾದ ಕೃಷಿ ವಿಶ್ವ ವಿದ್ಯಾಲಯಗಳು ಇಂದು ಬಂಡವಾಳ ನೀಡುವ ಕಾರ್ಪೋರೇಟ್ ವಲಯದ ಪರವಾಗಿರುವುದರಿಂದಾಗಿ ರೈತರು, ವಿಶ್ವವಿದ್ಯಾಲಯಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ರಾಜಾರಾಂ ತಲ್ಲೂರ್, ಎಲ್.ಎನ್.ತಲ್ಲೂರ್, ಸಮುದಾಯ ಸಂಘಟನೆಯ ಜಿ.ವಿ.ಕಾರಂತ್, ಬಾಲಕೃಷ್ಣ, ಉದಯ್ ಗಾಂವ್ಕರ್, ಸದಾನಂದ ಬೈಂದೂರು, ಪತ್ರಕರ್ತ ಎ.ರಾಮಕೃಷ್ಣ ಹೇರ್ಳೆ ಇದ್ದರು.

ಸಮುದಾಯ ಕಲಾವಿದರು ರೈತ ಗೀತೆ ಹಾಡಿದರು. ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ರಚಿಸಿದ ಪಿ.ಸಾಯಿನಾಥ ಅವರ ಕ್ಯಾರಿಕೇಚರನ್ನು ಸಾಯಿನಾಥ ಅವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net