ಕಾಂಗ್ರೆಸ್ ಸರ್ಕಾರದಿಂದ ಮನೆಮನೆಗೆ ಆರ್ಥಿಕ ಶಕ್ತಿ

Gaddadevaramuth
Published on

ರಟ್ಟಿಹಳ್ಳಿ: ಕೇಂದ್ರ ಸರ್ಕಾರದ ಕಳೆದ 10 ವರ್ಷದ ಸಾಧನೆ ಹೇಳಲು ಕೆಲವೇ ನಿಮಿಷ ಸಾಕು. ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೇಳಲು ದಿನಗಳೇ ಸಾಲುವುದಿಲ್ಲ. ಓರ್ವ ವ್ಯಕ್ತಿಯಿಂದ ಭಾರತ ವಿಶ್ವ ಗುರು ದಾರಿಯಲ್ಲಿ ನಡೆಯುತ್ತಿದೆ ಎಂಬುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಪ್ರತಿ ಮನೆ ಆರ್ಥಿಕವಾಗಿ ಸದೃಢವಾದಾಗ ಮಾತ್ರ ಭಾರತ ವಿಶ್ವ ಗುರು ಎಂದು ಒಪ್ಪಿಕೊಳ್ಳಬಹುದು ಎಂದು ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ತಾಲೂಕಿನ ಕಡೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ಆರ್ಥಿಕ ಶಕ್ತಿ ತುಂಬಿವೆ. ಬರಗಾಲದ ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಸಾಮಾನ್ಯ ವರ್ಗದ ಜನರಿಗೆ ಆರ್ಥಿಕವಾಗಿ ಸಹಕಾರಿಯಾಗಿವೆ ಎಂದರು.

ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುವುದು ನಿಶ್ಚಿತವಾಗಿದ್ದು, ರಾಷ್ಟ್ರೀಯ ನಾಯಕರ ಭರವಸೆಯಂತೆ ಮನೆಮನೆಗೆ ಮಹಾಲಕ್ಷ್ಮೀ ಯೋಜನೆ ಮತ್ತು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲಾಗುವುದು. ಎಲ್ಲ ವರ್ಗದ ಜನರ ಆರ್ಥಿಕ ಸಬಲೀಕರಣಗೊಳಿಸುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ. ಕ್ಷೇತ್ರದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಭಿವೃದ್ಧಿಗೊಳಿಸುವುದು, ಬೆಳೆಗಳಿಗೆ ಯೋಗ್ಯ ಬೆಂಬಲಬೆಲೆ ಜಾರಿ ಮಾಡುವುದು, ಕ್ಷೇತ್ರದ ಜನರ ಧ್ವನಿಯಾಗಿ ಸದಾ ನಿಮ್ಮ ಸೇವೆಗೆ ಸನ್ನದ್ಧರಾಗಿರುವುದು ನನ್ನ ಧ್ಯೇಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ದೇಶದ ಇತಿಹಾಸದಲ್ಲಿ 100 ದಿನಗಳಲ್ಲಿ ನೀಡಿದ ಭರವಸೆಯಂತೆ ಯೋಜನೆ ಜಾರಿ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಸಾಧನೆಯಾಗಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ನೀಡದೇ ರಾಜ್ಯದ ಯೋಜನೆಗೆ ಸ್ಪಂದಿಸಲಿಲ್ಲ. ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತವಾಗುತ್ತದೆ ಎಂದು ಟೀಕಿಸುವ ಟೀಕಾಕಾರರಿಗೆ ಒಂದು ಸವಾಲು ಹಾಕುತ್ತೇನೆ. ಯೋಜನೆ ಸ್ಥಗಿತವಾದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಯೋಜನೆ 5 ವರ್ಷ ಮುಂದುವರಿದರೆ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ ಎಂದು ಸವಾಲು ಹಾಕಿದರು.

ಜನ ಪರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ನಿಶ್ಚಿತವಾಗಿದೆ. ಮತದಾರರು ಖಂಡಿತವಾಗಿ ಅವರಿಗೆ ಆರ್ಶೀವಾದ ಮಾಡಲಿದ್ದಾರೆ ಎಂದರು.

ಕೆ.ಎಂ.ಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಬನ್ನಿಕೋಡ, ಸುಮಿತ್ರಾ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಸುನೀತಾ ದ್ಯಾವಕ್ಕಳವರ, ಮಹೇಶ ಗುಬ್ಬಿ, ಡಾ.ನಿಂಗಪ್ಪ ಚಳಗೇರಿ, ದುರ್ಗಪ್ಪ ನೀರಲಗಿ, ಎ.ಕೆ. ಪಾಟೀಲ, ನಿಂಗಪ್ಪ ಕಡೂರು, ತಿಪ್ಪಣ್ಣನವರ ವಕೀಲರು, ಪರಮೇಶಣ್ಣ ಕಟ್ಟೇಕಾರ, ಪರಶುರಾಮ ಎರೇಸೀಮೆ, ಪ್ರಭು ನಾಡರ, ಶೇಖಪ್ಪ ಸೇತಸನದಿ, ನಾಗನಗೌಡ ಕೋಣ್ತಿ, ವಿಜಯ ಅಂಗಡಿ, ಎಂ.ಎಸ್. ಪ್ರಕಾಶ, ಸುಜಾತಾ ಬಳಲು, ಕಡೂರು ದ್ಯಾಮನಗೌಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net