

ಬೇಲೂರು: ಪರಿಸ್ಥಿತಿಗನುಗುಣವಾಗಿ ಭೂಮಿಯನ್ನು ನಂಬಿ ಮಿಶ್ರ ಬೆಳೆಯೊಂದಿಗೆ ಯಾವ ರೈತರು ಮುಂದೆ ಸಾಗುತ್ತಾರೋ ಅವರನ್ನು ಭೂಮಿ ಎಂದಿಗೂ ಕೈಬಿಡುವುದಿಲ್ಲ. ಇದರಿಂದ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಹಾಗೂ ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರ ಹೇಳಿದರು.
ತಾಲೂಕಿನ ಮಲಸಾವರ ಗ್ರಾಮದ ತ್ರಿವೇಣಿ ಎಸ್ಟೇಟ್‌ನಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದಿಂದ ಬುಧವಾರ ಆಯೋಜಿಸಿದ್ದ ವರ್ಷಬೆಳೆ+ಮಿಶ್ರಬೆಳೆ= ತಿಂಗಳ ಆದಾಯ ಹಾಗೂ ಬೆಳೆಗಾರರೆಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಎಂಬ ಅಕ್ಷರಕ್ಕೆ ಬೆಲೆಯಿದೆ. ಆದರೆ, ರೈತ ಬೆಳೆದ ಬೆಳೆಗೆ ಬೆಲೆ ಇಲ್ಲ, ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲ. ಸಂಕಷ್ಟಗಳ ನಡುವೆಯೆ ಬೆಳೆ ಬೆಳೆದರೂ ರೈತರ ಆರ್ಥಿಕ ಬೆಳವಣಿಗೆ ಉತ್ತಮವಾಗಿಲ್ಲ. ಇತ್ತೀಚೆಗೆ ರೈತರ ಕೈ ಜಾರುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಗೆ ವೆಚ್ಚ ಕಮ್ಮಿ ಮಾಡಿ, ಕೃಷಿಯೊಂದಿಗೆ ಪಶು ಸಂಗೋಪನೆ, ಹೈನುಗಾರಿಕೆಯಿಂದ ಹೆಚ್ಚು ಆದಾಯ ಪಡೆಯಲು ಮುಂದಾಗಬೇಕು. ಜಗತ್ತಿಗೆ ಅನ್ನ ನೀಡಿದವರು ರೈತರು, ರೈತ ಯಾವತ್ತು ಬೇಡ ಬಾರದು. ಬೇಡುವವರಿಗೆ ಗೌರವ ಇಲ್ಲ. ರೈತರು ಸಾಲದ ಹೊರೆಯಲ್ಲಿ ಬೀಳುವುದಕ್ಕೆ ಪ್ರಮುಖವಾಗಿ ಸೀಮೀತ ಬೆಳೆ ಬೆಳೆಯುವುದೆ ಕಾರಣವಾಗಿದೆ. ಆದ್ದರಿಂದ ರೈತರು ಮಿಶ್ರ ಬೆಳೆಗಳನ್ನು ಬೆಳೆದರೆ ಕಾಲಕ್ಕೆ ತಕ್ಕ ಬೆಳೆಯನ್ನು ಪಡೆಯಬಹುದಾಗಿದೆ. ಶ್ರೀಗಂಧವನ್ನು ಬೆಳೆದು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಮಿಶ್ರ ಬೆಳೆಗಾರ ಡಾ.ಪ್ರದೀಪ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 20 ವರ್ಷಕ್ಕೊಮ್ಮೆ ಪಡೆಯುವ ಬೆಳೆಗಳ ಬೆಲೆ, ಮುಂದಿನ 20 ವರ್ಷಕ್ಕೆ ಸಿಗುತ್ತಿಲ್ಲ. ಆದ್ದರಿಂದ ಕಾಫಿ ಬೆಳೆಗಾರರು ಕಾಫಿಯೊಂದಿಗೆ ಬೇರೆ ಬೇರೆ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ನಾವುಗಳು ನಮ್ಮ ಮನಸ್ಸಿನ ಭಾವನೆಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಾಲಮನ್ನಾ ಮಾಡಿ ಎನ್ನುವುದಕ್ಕಿಂತ ನಾವುಗಳೇ ಉತ್ತಮ ಪರಿಸರ ನಿರ್ಮಿಸಿ ಮಿಶ್ರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಬೆಳೆಗಾರರು ಸಂಘಟಿತರಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥಮಲ್ಲೇಶ್ ಮಾತನಾಡಿ, 2018-19ರಲ್ಲಿ ಪೃಕೃತಿ ವಿಕೋಪದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಇಲ್ಲಿವರೆಗೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ಕಾಫಿ ಬೆಳೆ ಸಂಪೂರ್ಣ ಕುಸಿತ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಬೆಳೆಗಾರರು ಆತ್ಮಹತ್ಯೆಗೆ ಒಳಗಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಷಬೆಳೆ+ಮಿಶ್ರಬೆಳೆ=ತಿಂಗಳ ಆದಾಯ ಹಾಗೂ ಬೆಳೆಗಾರರೆಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿ ಬಿ.ಎಲ್.ಶಂಕರ್, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ, ತಾಲೂಕು ಅಧ್ಯಕ್ಷ ಗೋವಿಂದಶೆಟ್ಟಿ, ನೃತ್ಯ ಕಲಾವಿದೆ ಕುಮಾರಿ ಮೇಘನಾ, ಕರ್ನಾಟಕ ಬೆಳೆಗಾರರ ಒಕ್ಕೂಟದ ರವೀಂದ್ರ, ಯುವ ಸಾಧಕ ಸೂರ್ಯ ಸುಬ್ಬಯ್ಯ, ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಬ್ದುಲ್‌ಖಲೀಲ್, ರೋಷನ್, ಮಾಜಿ ಅಧ್ಯಕ್ಷ ಜಯರಾಮ್ ಸೇರಿದಂತೆ ಇತರರಿದ್ದರು.