

ರಾಯಚೂರು: ಜನರ ಆರ್ಥಿಕ ಸ್ಥಿತಿ ಸುಧಾರಣೆಯಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದ್ದು, ಬೀದಿ ಬದಿ ವ್ಯಾಪಾರಿಗಳು ಸರ್ಕಾರದಿಂದ ನೀಡಲಾಗುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆತ್ಮನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಗಳಿಗೆ ಕಿರು ಸಾಲ ಕುರಿತು ಜಾಗೃತಿ ಹಾಗೂ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಜನೆಯಡಿ ಸಾಲ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಜನರು ತಮ್ಮ ಆರ್ಥಿಕತೆ ಅಭಿವೃದ್ಧಿಗೆ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ಹೆಚ್ಚಿನ ತೊಂದರೆ ಅನುಭವಿಸಿದ್ದು, ಸಮಸ್ಯೆಗೆ ಪರಿಹಾರ ನಿಟ್ಟಿನಲ್ಲಿ ಕಿರು ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಕಾರಿ ಮಹೆಬೂಬ್ ಜಿಲಾನಿ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ, ಮಾರಾಟ ಪ್ರಮಾಣಪತ್ರ ವಿತರಣೆ ಸೇರಿದಂತೆ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಸಲು ವ್ಯವಹಾರವನ್ನು ಪುನರ್ ಪ್ರಾರಂಭಿಸಲು ಬಂಡವಾಳ ಒದಗಿಸುವ ಕೆಲಸ ಮಾಡಲಾಗುತ್ತಿದೆ. ವ್ಯಾಪಾರಸ್ಥರಿಗೆ ಕೈಗೆಟುವ ದರದಲ್ಲಿ ಬಂಡವಾಳ ಹಾಗೂ ಸಾಲ ಸೌಲಭ್ಯ ಒದಗಿಸುವುದು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವಿ, ಜಿಲ್ಲಾ ಕೌಶಲ್ಯ ಮಿಷನ್ ವ್ಯವಸ್ಥಾಪಕ ಸುರೇಶ ವಿಭೂತಿ ಉಪಸ್ಥಿತರಿದ್ದರು.