

ದಾವಣಗೆರೆ: ನಮಗೆ ಅರಿವಿಲ್ಲದಂತೆ ನಾವೆಲ್ಲರೂ ಮೈಕ್ರೋ ಪ್ಲಾಸ್ಟಿಕ್ ಅನ್ನು ವಾತಾವರಣದಲ್ಲಿ ಸೇರಿಸುತ್ತಿದ್ದೇವೆ. ಇದರಿಂದ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ ಎಂದು ಪರಿಸರ ಪ್ರೇಮಿ ಡಾ.ಶಾಂತಾ ಭಟ್ ಹೇಳಿದರು.
ನಗರದ ಕುಂದುವಾಡ ಕೆರೆಯಲ್ಲಿ ವಾಯು ವಿಹಾರಿಗಳ ಬಳಗ ಮತ್ತು ಸಪ್ತಗಿರಿ ಪದವಿಪೂರ್ವ ಕಾಲೇಜು ವತಿಯಿಂದ ಬುಧವಾರ ವಿಶ್ವ ಪರಿಸರ
ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಣ್ಣಿಗೆ ಕಾಣದಂತಹ ಪ್ಲಾಸ್ಟಿಕ್‌ನ ಕಣಗಳು ಯಾವುದೋ ರೂಪದಲ್ಲಿ ದೇಹ ಸೇರುತ್ತಿವೆ ಎಂದರು.
ಚಿಕ್ಕದಾದ ಈ ಮೈಕ್ರೋ ಪ್ಲಾಸ್ಟಿಕ್ ಕಣ ಮನುಷ್ಯ ಮಾತ್ರವಲ್ಲದೆ ಯಾವುದೇ ಪ್ರಾಣಿ, ಸಸ್ಯದ ದೇಹ ಸೇರುವ ಸಾಮರ್ಥ್ಯ ಹೊಂದಿವೆ.
ಅದು ಸಸ್ಯಗಳಲ್ಲಿ ಸುಲಭವಾಗಿ ಬೆರೆತು, ಸೇವಿಸುವ ಹಣ್ಣು, ತರಕಾರಿಗಳಲ್ಲಿ ಸೇರುತ್ತದೆ. ನೀರಿನ ಮೂಲಕ ಜಲಚರಗಳ ದೇಹ ಸೇರಿ ರೂಪದಲ್ಲಿ ಸೇವಿಸುವ ವ್ಯಕ್ತಿಯ ದೇಹ ಸೇರುತ್ತದೆ ಎಂದು ತಿಳಿಸಿದರು.
ಹಾರ್ಮೋನ್ ವ್ಯವಸ್ಥೆ ಹಾಳು: ಮನುಷ್ಯನ ದೇಹದ ಟಿಶ್ಯುಗಳನ್ನು ಪರೀಕ್ಷಿಸಿದರೆ ಒಂದು ಜೀವಕಣದಲ್ಲಿ 16000 ಪಾರ್ಟಿಕಲ್ ಮೈಕ್ರೋ ಪ್ಲಾಸ್ಟಿಕ್ ಸಿಗುತ್ತವೆ.
ಇವು ಜೀವಕೋಶ ಸೇರಿ ನಮ್ಮ ಚಯಾಪಚಯ (ಮೆಟಬಾಲಿಸಂ), ಅನುವಂಶೀಯ ಕ್ರಮಾವಳಿ ಬದಲಿಸುವ ಹಾಗೂ ಹಾರ್ಮೋನ್ ವ್ಯವಸ್ಥೆ ಪಲ್ಲಟಗೊಳಿಸುವ ಸಾಮರ್ಥ್ಯ ಹೊಂದಿವೆ ಎಂದು ಎಚ್ಚರಿಸಿದರು.
ಸಿಂಥೆಟಿಕ್ ಬಿಡಿ ಹತ್ತಿ ಹಿಡಿ: ನಾವು ಇಂದು ಎದುರಿಸುತ್ತಿರುವ ಹಲವಾರು ಅನಾರೋಗ್ಯ ತೊಂದರೆಗಳಿಗೆ ಮೈಕ್ರೋ ಪ್ಲಾಸ್ಟಿಕ್ ಮೂಲ ಕಾರಣ.
ಬೊಜ್ಜು, ಥೈರಾಯ್ಡ, ಮಧುಮೇಹ, ಅಧಿಕ ರಕ್ತದೊತ್ತಡ, ಅಲರ್ಜಿ ಮಾತ್ರವಲ್ಲದೆ ಎಲ್ಲ ರೀತಿ ಮಾರಣಾತಿಕ ಕಾಯಿಲೆಗಳಿಗೂ ಈ ಮೈಕ್ರೋ ಪ್ಲಾಸ್ಟಿಕ್ ಕಾರಣವಾಗಿದೆ.
ಇದರಿಂದ ರಕ್ಷಣೆ ಪಡೆಯಲು ಸಿಂಥೆಟಿಕ್ ಉಡುಪು ತ್ಯಜಿಸಿ, ಮಣ್ಣಿನಲ್ಲಿ ಕೊಳೆಯುವಂತಹ ಹತ್ತಿ, ರೇಷ್ಮೆ ಮತ್ತು ಉಣ್ಣೆ ಉಡುಪು ಧರಿಸಬೇಕು ಎಂದು ಹೇಳಿದರು.
ವೈದ್ಯ ಡಾ. ಸುರೇಂದ್ರ ಮಾತನಾಡಿ, ನಾವೆಲ್ಲರೂ ಮಾತನಾಡುವುದು ಹೆಚ್ಚು. ಆದರೆ, ಆಡಿದ್ದನ್ನು ಮಾಡಿ ತೋರಿಸುವುದು ತೀರಾ ಕಡಿಮೆ.
ಹೀಗಾಗಿ, ಪರಿಸರ ರಕ್ಷಣೆ ಕುರಿತು ಕೇವಲ ಮಾತಾಗದೇ ಕೃತಿಗೆ ಇಳಿಯಬೇಕಿದೆ ಎಂದರು. ಕಾರ್ಯಕ್ರಮದ ಬಳಿಕ ವಾಯುವಿಹಾರಿಗಳಿಗೆ ಸಸಿ ವಿತರಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿ ಎಸ್.ಕೆ. ದೇವರಾಜ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಸಪ್ತಗಿರಿ ಶಿಕ್ಷಣ ಸಂಸ್ಥೆ ರಾಮಮೂರ್ತಿ, ವಾಯುವಿಹಾರಿಗಳ ಬಳಗದ ಈಶ್ವರ್ ಸಿಂಗ್, ಬಿ.ಎಚ್. ಶಿವಕುಮಾರ್, ವಾಯುವಿಹಾರಿಗಳು, ಸಪ್ತಗಿರಿ ಪಿಯು ಕಾಲೇಜು ವಿದ್ಯಾರ್ಥಿಗಳು ಇದ್ದರು.