

ಕೋಟ: ಕೋಟದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಿತ್ಯವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೋಟದ ಅಮೃತೇಶ್ವರೀ ದೇಗುಲದಲ್ಲಿರುವ ಗೀತಾನಂದ ದರ್ಬಾರ್ ವೈಭವದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ದೊಡ್ಡ ಗಣೇಶನಿಗೆ ವಿಶೇಷ ಪೂಜೆ ಜರುಗುತ್ತಿದ್ದು, ನಿತ್ಯ ನೂರಾರು ಮಂದಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
4ರಂದು ಗಣೇಶೋತ್ಸವ ಸಮಾಪನಗೊಳ್ಳಲಿದ್ದು ಕೋಟದ ರಾಷ್ಟ್ರೀಯ ಹೆದ್ದಾರಿ ಮೂಲಕ ಭವ್ಯ ಶೋಭಾಯಾತ್ರೆ ಸಾಗಲಿದ್ದು ಪಡುಕರೆ ಕಡಲಿನಲ್ಲಿ ಜಲಸ್ತಂಭನ ನಡೆಯಲಿದೆ.
ಗಮನ ಸೆಳೆದ ಪರಿಸರಸ್ನೇಹಿ ಅಭಿಯಾನ: ಸಮಿತಿಯ ಗೌರವಾಧ್ಯಕ್ಷ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಅವರ ಯೋಜನೆಯಂತೆ ಈ ಬಾರಿಯ ಸುವರ್ಣ ಮಹೋತ್ಸವವನ್ನು ಪರಿಸರಸ್ನೇಹಿ ಗಣೇಶೋತ್ಸವವಾಗಿ ಆಚರಿಸಲಾಗುತ್ತಿದೆ. ಆಗಮಿಸುವ ಭಕ್ತರಿಗೆ ಗಿಡಗಳು, ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಪ್ಲಾಸ್ಟಿಕ್‌ಮುಕ್ತ ಗಣೇಶೋತ್ಸವ ಉದ್ದೇಶವನ್ನು ಸಾಕಾರಗೊಳಿಸಲಾಗಿದೆ. ಇದಕ್ಕಾಗಿ ಈಗಾಗಲೇ 5000 ಸಾವಿರ ಗಿಡಗಳನ್ನು ತರಲಾಗಿದ್ದು, ಮಂಗವಾರದವರೆಗೆ ಮೂರವರೆ ಸಾವಿರ ಗಿಡಗಳನ್ನು ಭಕ್ತರಿಗೆ ಹಂಚಲಾಗಿದೆ. ಅಲ್ಲದೆ ಐವತ್ತು ವಿವಿಧ ರೀತಿಯ ಗಣಪತಿ ಮೂರ್ತಿಗಳು ಇಡಲಾಗಿದ್ದು ಆಕರ್ಷಣೀಯವಾಗಿದೆ.
ಸುವರ್ಣ ಮಹೋತ್ಸವದ ಅಂಗವಾಗಿ ಕೋಟದ ದೊಡ್ಡ ಗಣೇಶನಿಗೆ ಮಂಗಳವಾರ ಸುಬ್ರಹ್ಮಣ್ಯ ಅಡಿಗ ನೇತೃತ್ವದಲ್ಲಿ ಗಣಪತಿ ಹೋಮ ನೆರವೇರಿತು. ಗಿರಿಜಾ ಕಂಡ್ಲೂರು, ನರಸಿಂಹ ಜೋಗಿ, ಬೆಂಗಳೂರಿನ ಭವಾನಿ ಕಂಗನ್ ಸ್ಟೋರ್ಸ್ ಮಾಲೀಕ ಚಂದ್ರಶೇಖರ ಜೋಗಿ, ಶ್ರೀನಿವಾಸ ಜೋಗಿ, ರಾಜಶೇಖರ ಜೋಗಿ, ಭಾರ್ಗವ ಜೋಗಿ ಸೇವಾಕರ್ತರಾಗಿದ್ದರು.
ವಿವಿಧ ಭಜನಾ ತಂಡಗಳಿಂದ ಭಜನೆ, ರಸಮಂಜರಿ, ಜಾದೂ ಪ್ರದರ್ಶನ, ಹನುಮಗಿರಿ ಮೇಳದವರಿಂದ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನಗೊಂಡಿತು.
ಗಣೇಶೋತ್ಸವ ಸಮಿತಿಯ ಪ್ರಮುಖರಾದ ಚಂದ್ರ ಆಚಾರ್, ಚಂದ್ರ ಪೂಜಾರಿ, ಗಣೇಶ್ ಪೂಜಾರಿ, ಜೀವನ್ ಕದ್ರಿಕಟ್ಟು, ಸುಧೀರ್ ಪೂಜಾರಿ, ಅಮೃತ್ ಜೋಗಿ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು, ಮಾಜಿ ಟ್ರಸ್ಟಿ ಸುಬ್ರಾಯ ಆಚಾರ್, ಅರ್ಚಕರಾದ ಸುಬ್ರಾಯ ಜೋಗಿ, ರೂಪೇಶ್ ಜೋಗಿ, ದಿನೇಶ್ ಜೋಗಿ, ರಾಘವೇಂದ್ರ ಮತ್ತಿತರರು ಇದ್ದರು.