ಪರಿಸರ ಸ್ನೆಹಿ ಗಣೇಶೋತ್ಸವ ಜಾಗೃತಿ ಆಂದೋಲನಕ್ಕೆ ಚಾಲನೆ

25adarshkdga6
Published on

ಮಡಿಕೇರಿ: ಗೌರಿ-ಗಣೇಶೋತ್ಸವ ಸಂದರ್ಭದಲ್ಲಿ ರಾಸಾಯನಿಕ ಮಿಶ್ರಿತ ಮೂರ್ತಿಯನ್ನು ಬಳಸದೇ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಮತ್ತು ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು.


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಸಹಯೋಗದೊಂದಿಗೆ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಶಾಲೆಯ ಇಕೋ ಕ್ಲಬ್‌ನ ಆಶ್ರಯದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಪರಿಸರ ಸ್ನೆಹಿ ಗಣೇಶೋತ್ಸವ ಜನಜಾಗೃತಿ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.


ಪಿಒಪಿ ಮತ್ತು ರಾಸಾಯನಿಕ ಗಣೇಶ ವಿಗ್ರಹಗಳನ್ನು ಜಲಮೂಲಗಳಿಗೆ ಬಿಡುವುದರಿಂದ ಮಾಲಿನ್ಯ ಉಂಟಾಗಿ ಜಲಚರಗಳು ಮತ್ತು ಪರಿಸರಕ್ಕೆ ತೀವ್ರ ಧಕ್ಕೆಯಾಗುತ್ತಿರುವ ಕಾರಣದಿಂದ ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದೇವೆ.ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು. ಕರೋನಾ ಅವಧಿಯಲ್ಲಿ ಜಿಲ್ಲೆಯ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಿಸರ ಸ್ನೇಹಿ ಅರಿಶಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಕೊಡಗಿನಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಲೆಯ ಮಕ್ಕಳು ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಈ ಅಭಿಯಾನದ ನೇತೃತ್ವ ವಹಿಸಿರುವ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ತಿಳಿಸಿದರು.


ನಾಗರಿಕರು ರಾಸಾಯನಿಕ ಗಣೇಶ ಮೂರ್ತಿಯನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ನದಿ, ಕೆರೆ ಹಾಗೂ ಜಲಮೂಲಗಳು ಕಲುಷಿತವಾಗುವುದನ್ನು ತಡೆಗಟ್ಟುವ ದೃಷ್ಟಿಯಿಂದ ರಾಸಾಯನಿಕ ಮೂರ್ತಿಯ ಬಳಕೆಯಿಂದ ದೂರವಿದ್ದು, ರೋಗರುಜಿನಗಳು ಹರಡದಂತೆ ಎಚ್ಚರವಹಿಸಬೇಕಿದೆ ಎಂದರು.


ಆಂದೋಲನದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಪರಿಸರ ಸ್ನೆಹಿ ಗಣೇಶೋತ್ಸವ ಆಚರಣೆ ಮೂಲಕ ನಾವು ಮಾಲಿನ್ಯ ತಡೆಗೆ ಪಣ ತೊಡಬೇಕು ಎಂದರು.


ಕಾರ್ಯಕ್ರಮದಲ್ಲಿ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಿ.ಕೃಷ್ಣಚೈತನ್ಯ, ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ, ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ಕೆ.ಜಿ.ನೀಲಕಂಠಪ್ಪ, ವಿಜ್ಞಾನ ಪರಿಷತ್ತಿನ ಮಾಜಿ ಉಪಾಧ್ಯಕ್ಷೆ ಡಿ.ಎಂ.ರೇವತಿ ಇತರರಿದ್ದರು.


ಸಹಿ ಸಂಗ್ರಹ ಅಭಿಯಾನ: ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಿ ಹಾಕುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net