

ಶಿವಮೊಗ್ಗ: ಹಲವು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಒತ್ತು ನೀಡುತ್ತಿರುವ ಕೋಟೆ ರಸ್ತೆಯ ವಾಸವಿ ವಿದ್ಯಾಲಯ ಈ ವರ್ಷವೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ಹಾಗೂ ಶಾಲಾ ಆವರಣದಲ್ಲಿ ಕೃತಕ ಕೆರೆ ನಿರ್ಮಿಸಿ ಗಣೇಶನ ವಿಸರ್ಜನೆಗೆ ಅವಕಾಶ ಕಲ್ಪಿಸಿದೆ.
ನಮ್ಮ ಶಾಲೆಯ ರೋಟರ‌್ಯಾಕ್ಟ್ ಕ್ಲಬ್‌ನ ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣೇಶೋತ್ಸವದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೇವಲ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಮೂರ್ತಿಯನ್ನು ನಾವೇ ಮನೆಗೆ ತಲುಪಿಸಲಿದ್ದೇವೆ. ನಾಗರಿಕರು ಬಯಸಿದರೆ ಗಣೇಶ ಮೂರ್ತಿಗಳ ವಿಸರ್ಜನೆಯನ್ನೂ ಮಾಡುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ತಿಳಿಸಿದರು.
ಕಳೆದ ಎಂಟು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶೋತ್ಸವಕ್ಕಾಗಿ ಕೆಲಸ ಮಾಡಲಾಗುತ್ತಿದೆ. ಶಾಲೆ ಆವರಣದಲ್ಲೇ ಕೃತಕ ಕೆರೆ ನಿರ್ಮಿಸುತ್ತೇವೆ. ಮೊದಲ ದಿನ ಸುಮಾರು 500 ಗಣೇಶ ಮೂರ್ತಿಗಳನ್ನು ಅಲ್ಲಿ ವಿಸರ್ಜಿಸಲಾಗುತ್ತದೆ. ಬಣ್ಣ, ರಾಸಾಯನಿಕಗಳನ್ನು ಬಳಸಿ ಮಾಡಿದ ಗಣೇಶ ಮೂರ್ತಿಗಳನ್ನು ನದಿ, ಕೆರೆಗಳಲ್ಲಿ ವಿಸರ್ಜಿಸುವುದರಿಂದ ನೀರಿನ ಮೂಲ ಮಲಿನವಾಗುತ್ತದೆ ಎಂಬ ಕಾರಣಕ್ಕೆ ಕೃತಕ ಕೆರೆ ನಿರ್ಮಿಸಲಾಗುತ್ತಿದೆ ಎಂದರು.
ಪರಿಸರ ಸ್ನೇಹಿ ಗಣೇಶಮೂರ್ತಿಗಳು ಬೇಕಿದ್ದಲ್ಲಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆ ಬಗ್ಗೆ ಮಾಹಿತಿಗೆ (9916514066) ಸಂಪರ್ಕಿಸುವಂತೆ ತಿಳಿಸಿದರು. ವಿದ್ಯಾಲಯದ ಅಧ್ಯಕ್ಷ ಬಿ.ಎಲ್.ಶ್ಯಾಮಸುಂದರ್, ನಿರ್ದೇಶಕ ನಾಗರಾಜ್, ಸಂಯೋಜಕಿ ಸೌಮ್ಯಾ, ವಾಸವಿ ರೋಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷೆ ತನುಶ್ರೀ, ವಿದ್ಯಾರ್ಥಿಗಳಾದ ಚೇತನ್, ಚಿನ್ನೀಶಾ ಇದ್ದರು.