

ಸದೇಶ್ ಕಾರ್ಮಾಡ್ ಮೈಸೂರು
ಜಲಮೂಲವನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶೋತ್ಸವ ಮೂರ್ತಿಗಳ ಹಾವ ಳಿಯ ನಡುವೆಯೂ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಜನರು ಒಲವು ತೋರುತ್ತಿದ್ದಾರೆ.
ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಮೂಡಿಸಿದ ಅರಿವಿನ ಪರಿಣಾಮ ಜನರು ಮಣ್ಣಿನಿಂದ ತಯಾರಿಸಿದ ಗೌರಿ, ಗಣೇಶ ಉತ್ಸವ ಮೂರ್ತಿಗಳನ್ನು ಖರೀದಿಸಲು ಈ ಬಾರಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೋವಿಡ್ ಪರಿಣಾಮದಿಂದ ಕೆಲವು ವರ್ಷಗಳ ಕಾಲ ಗಣೇಶೋತ್ಸವ ಮೂರ್ತಿಗಳು ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗುತ್ತಿರಲಿಲ್ಲ. ಆದರೆ, ಈ ಬಾರಿ ಉತ್ಸವ ಮೂರ್ತಿಗಳ ಮಾರಾಟ ಹೆಚ್ಚಾಗಿರುವ ಜತೆಗೆ ಮಣ್ಣಿನ ಮೂರ್ತಿಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ವಿಶೇಷ.
‘ಕಳೆದ ವರ್ಷ ಮಣ್ಣಿನಿಂದ ತಯಾರಿಸಿದ ಬಣ್ಣದ ಮೂರ್ತಿಗಳು ಹಾಗೂ ಬಣ್ಣ ರಹಿತ ಮಣ್ಣಿನ ಮೂರ್ತಿಗಳ ಮಾರಾಟ ಸಮ ಪ್ರಮಾಣದಲ್ಲಿ ಇತ್ತು. ಆದರೆ, ಈ ಬಾರಿ ಶೇ.80 ರಷ್ಟು ಜನರು ಬಣ್ಣ ರಹಿತ ಮಣ್ಣಿನ ಮೂರ್ತಿ ಖರೀದಿಗೆ ಒಲವು ತೋರಿದ್ದಾರೆ. ಪ್ರತಿ ವರ್ಷ ಮಣ್ಣಿನ ಮೂರ್ತಿ ಹಾಗೂ ಬಣ್ಣ ರಹಿತ ಮಣ್ಣಿನ ಮೂರ್ತಿಗಳ ಖರೀದಿಗೆ ಜನರು ಒಲವು ತೋರುತ್ತಿರುವುದು ಸಂತಸದ ವಿಚಾರ’ ಎನ್ನುತ್ತಾರೆ ಗಣೇಶೋತ್ಸವ ಮೂರ್ತಿ ತಯಾರಕರಾದ ರೇವಣ್ಣ.
ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಗಣೇಶೋತ್ಸವ ಮೂರ್ತಿ ಮಾರಾಟ ಮಾಡುವ ಪ್ರತಿಯೊಂದು ಸ್ಥಳಗಳಿಗೆ ಭೇಟಿ ನೀಡಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಧಾರ್ಮಿಕ ಪ್ರತಿಷ್ಠಾನದಿಂದ ನಗರದ ಮಾಧವ ಕೃಪಾದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ಸಾರ್ವಜನಿಕರಿಗೆ ಮಣ್ಣಿನ ಗಣೇಶೋತ್ಸವ ಮೂರ್ತಿ ತಯಾರಿಸುವ ಕುರಿತು ತರಬೇತಿ ನೀಡಿದೆ. ಚಿತ್ರಶಿಲ್ಪ ಕಲಾ ಕುಟೀರ ಮತ್ತು ರೋಟರಿ ಸಂಸ್ಥೆಯಿಂದ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯಲ್ಲಿ ಮಣ್ಣಿನ ಗಣೇಶೋತ್ಸವ ಮೂರ್ತಿ ತಯಾರಿಕೆಯ ಕಾರ್ಯಾಗಾರ ನಡೆಸಿದೆ. ಅಪೂರ್ವ ಸ್ನೇಹ ಬಳಗದಿಂದ ಚಾಮುಂಡಿಪುರಂನಲ್ಲಿ ‘ಪರಿಸರಸ್ನೇಹಿ ಗಣಪ ಬಳಸಿ’ ಎಂಬ ಸಂದೇಶದೊಂದಿಗೆ ಉಚಿತವಾಗಿ ಮಣ್ಣಿನ ಗಣೇಶೋತ್ಸವ ಮೂರ್ತಿಗಳನ್ನು ವಿತರಿಸಲಾಗಿದೆ. ಈ ರೀತಿ ಸಂಘ ಸಂಸ್ಥೆಗಳು ನಗರದಲ್ಲಿ ಪರಿಸರಸ್ನೇಹಿ ಗಣೇಶೋತ್ಸವ ಆಚರಣೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಪ್ರಕಾರ ಪಿಒಪಿ ಮೂರ್ತಿಗಳ ಬಳಕೆ ಶಿಕ್ಷಾರ್ಹ ಅಪರಾಧವಾಗಿದ್ದು, ತಯಾರಿಕೆ ಮಾಡುವವರಿಗೆ 1ಲಕ್ಷ ದಂಡ, 5 ವರ್ಷ ಜೈಲು ಶಿಕ್ಷೆ, ಮಾರಾಟ ಮತ್ತು ವಿಸರ್ಜನೆ ಮಾಡುವವರಿಗೆ 1 ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕಠಿಣ ಕಾನೂನು ಇದ್ದರೂ ಪಿಒಪಿ ಮೂರ್ತಿಗಳ ಮಾರಾಟಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ನಗರದ ವಿವಿಧೆಡೆ ಕದ್ದುಮುಚ್ಚಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಪಿಒಪಿ ಮೂರ್ತಿಗಳ ಜತೆಗೆ ಪೇಪರ್ ಪಲ್ಪ್‌ನಿಂದ ತಯಾರಿಸಿದ ಮೂರ್ತಿಗಳು ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪೇಪರ್ ಪಲ್ಪ್ ಮೂರ್ತಿಗಳ ತಯಾರಿಕೆಗೆ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಅಂಶಗಳನ್ನು ಬಳಕೆ ಮಾಡಲಾಗುತ್ತದ್ದು, ಈ ರಾಸಾಯನಿಕಗಳು ಜಲಚರಗಳ ಜೀವಕ್ಕೆ ಕಂಟಕವಾಗಲಿದೆ.
ನಗರದ ಎಲ್ಲ ಗಣೇಶೋತ್ಸವ ಮೂರ್ತಿಗಳ ಮಾರಾಟಗಾರರ ಬಳಿ ತೆರಳಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲವು ಕಡೆಗಳಿಂದ ಮೂರ್ತಿಗಳನ್ನು ಪರೀಕ್ಷೆಗೆ ತೆಗೆದುಕೊಂಡು ಬಂದಿದ್ದೇವೆ. ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಗರದಲ್ಲಿ ಕಂಡು ಬರುತ್ತಿಲ್ಲ. ನಗರದ ಯಾವುದೇ ಭಾಗದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಕಂಡು ಬಂದರೆ ಸಾರ್ವಜನಿಕರು ನಗರ ಪಾಲಿಕೆಯ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ