

ಉಡುಪಿ: ಹಳ್ಳಿಗಳಲ್ಲಿ ಕಾಂಕ್ರೀಟ್ ಸೇತುವೆಗಳಿಂದಾಗಿ ಮರದ ಕಾಲುಸಂಕಗಳೆಲ್ಲಾ ನೀರು ಪಾಲಾಗುತ್ತಿವೆ. ಈ ಮಧ್ಯೆ ಸ್ಥಳೀಯ ವಸ್ತುಗಳನ್ನೇ ಉಪಯೋಗಿಸಿ ಸೇತುವೆ ನಿರ್ಮಿಸುವ ಪರಿಣಿತರೂ ಮರೆಯಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಈ ಕೌಶಲ ಉಳಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಮಾಳ ಗ್ರಾಮದಲ್ಲಿ ಕಳೆದ ವರ್ಷದಿಂದ ಸೇತುಬಂಧ ಅಭಿಯಾನ ನಡೆಯುತ್ತಿದೆ. ಈ ವರ್ಷವೂ ಘಟ್ಟದಿಂದ ಹರಿದು ಬರುವ ಸಣ್ಣ ತೊರೆ, ಹೊಳೆಗಳನ್ನು ದಾಟಲು ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.
ಸದ್ಯ ಮುಂಗಾರು ಮಳೆ ಆರಂಭವಾಗಿರುವುದರಿಂದ ಹೊಳೆಗಳು ತುಂಬಿ ಹರಿಯುತ್ತಿವೆ. ಇದನ್ನು ದಾಟಲು ಕಾಂಕ್ರೀಟ್ ಸೇತುವೆ ಬದಲಿಗೆ ಪ್ರಾಚೀ ಸಂಸ್ಥೆ ವತಿಯಿಂದ ಪರಿಸರಕ್ಕೆ ಪೂರಕ ಕಾಲು ಸಂಕ ರಚಿಸಲಾಗುತ್ತಿದೆ. ಈ ಭಾಗದಲ್ಲಿ ಸುಮಾರು 6 ಮರದ ಕಾಲುಸಂಕಗಳಿದ್ದು, ಕಾಲಕ್ರಮೇಣ ಜೀರ್ಣಾವಸ್ಥೆಗೆ ತಲುಪಿದ್ದವು. ಕಳೆದ ವರ್ಷ 4 ಸಂಕಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಈ ವರ್ಷ 2 ಸಂಕಗಳ ನಿರ್ಮಾಣವಾಗಿದ್ದು, ಜತೆಗೆ ಕಳೆದ ವರ್ಷ ನಿರ್ಮಿಸಿದ ಕೆಲವು ಸಂಕಗಳನ್ನು ದುರಸ್ತಿಗೊಳಿಸಲಾಗುತ್ತಿದೆ.
ಸ್ಥಳೀಯ ಉದ್ಯೋಗ
ಕರೊನಾ ಸಂಕಷ್ಟ ಕಾಲದಲ್ಲಿ ಸ್ಥಳೀಯ ಕುಶಲಕರ್ಮಿಗಳಿಗೆ ಉದ್ಯೋಗವೂ ಲಭಿಸಿದ್ದು, ಕಳೆದ 2-3 ದಿನಗಳಿಂದ 8 ಮಂದಿ ನುರಿತ ಕೆಲಸಗಾರರು ಅಡಿಕೆ ಮರದಿಂದ ಕಾಲುಸಂಕ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. 2 ದಿನಗಳಲ್ಲಿ 1 ಸೇತುವೆ ರಚಿಸಬಹುದಾಗಿದ್ದು, ಸುಮಾರು 9 ಸಾವಿರ ರೂ. ವೆಚ್ಚವಾಗುತ್ತದೆ. 1ವರ್ಷ ಬಾಳಿಕೆ ಬರುತ್ತದೆ. ಇದರಿಂದಾಗಿ ಪ್ರತೀ ವರ್ಷವೂ ಸ್ಥಳೀಯರಿಗೆ ಉದ್ಯೋಗ ಲಭಿಸಿದಂತಾಗುತ್ತದೆ.
ಮೇಘಾಲಯ ಮೊದಲಾದ ರಾಜ್ಯಗಳಲ್ಲಿ ಇಂಥ ಮರದ ಕಾಲುಸಂಕಗಳನ್ನು ಹೆಚ್ಚಾಗಿ ನೋಡಬಹುದು. ಕರಾವಳಿ ಭಾಗಗಳಲ್ಲಿ ಈ ಹಿಂದೆ ಇಂಥ ಸೇತುವೆಗಳೇ ಪ್ರಮುಖ ಸಂಪರ್ಕ ಕೊಂಡಿ. ಈಗ ಕಾಂಕ್ರೀಟ್ ಭರದಲ್ಲಿ ಕಾಲುಸಂಕ ನಿರ್ಮಾಣ ಕಲೆ ನಶಿಸಿಹೋಗುತ್ತಿದೆ. ಇದನ್ನು ಉಳಿಸುವ ಸಣ್ಣ ಪ್ರಯತ್ನವೇ ಸೇತುಬಂಧ. ಗ್ರಾಮೀಣ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಇದನ್ನು ಬಳಸಿಕೊಳ್ಳಬಹುದು.
ಪುರುಷೋತ್ತಮ ಅಡ್ವೆ, ಪ್ರವರ್ತಕ, ಪ್ರಾಚೀ ಸಂಸ್ಥೆ