ಮೈಸೂರಿನಲ್ಲಿ ಪರಿಸರ ಸ್ನೇಹಿ ದೀಪಾವಳಿ

Deepawali
Published on

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಂದರ್ಭ ಭಾರಿ ಪ್ರಮಾಣದಲ್ಲಿ ರಾಸಾಯನಿಕಗಳಿಂದ ಕೂಡಿದ ಪಟಾಕಿಗಳ ಮಾರಾಟಕ್ಕೆ ಕಡಿವಾಣ ಹಾಕ ಲಾಗುತ್ತಿದ್ದು, ನಿಷೇಧಿತ ಪಟಾಕಿಗಳ ಮೇಲೆ ಕಾರ್ಯಪಡೆ ಕಣ್ಗಾವಲು ಇರಿಸಿದೆ. ಹಾಗಾಗಿ ಈ ಬಾರಿಯ ಬೆಳಕಿನ ಹಬ್ಬವನ್ನು ಕಡಿಮೆ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುವ ಹಸಿರು ಪಟಾಕಿಯೊಂದಿಗೆ ಮಾತ್ರ ಆಚರಿಸಬೇಕು.

ಎಂದಿನಂತೆ ಈ ಬಾರಿಯೂ ನಗರದ ಜೆಕೆ ಮೈದಾನ ಹಾಗೂ ಜೆಎಲ್‌ಬಿ ರಸ್ತೆಯಲ್ಲಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಾಣಕ್ಕೆ ಪಾಲಿಕೆ ಅವಕಾಶ ನೀಡಲಿದೆ. ಈ ಮಳಿಗೆಗಳಲ್ಲಿ ಹಸಿರು ಪಟಾಕಿ ಹೊರತು ಪಡಿಸಿ ಭಾರಿ ಪ್ರಮಾಣದ ರಾಸಾಯನಿಕಗಳನ್ನು ಹೊಂದಿರುವ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡಿದರೆ ಅಂತಹ ಪಟಾಕಿಗಳನ್ನು ವಶಕ್ಕೆ ಪಡೆದು ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಇದಕೋಸ್ಕರ ಜಿಲ್ಲಾ ಅಗ್ನಿಶಾಮಕ ದಳ, ನಗರ ಪಾಲಿಕೆ, ಆರೋಗ್ಯ ಇಲಾಖೆ, ತಹಸೀಲ್ದಾರ್, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರಿಕರು ಹಾಗೂ ಸರ್ಕಾರೇತರ ಸಂಸ್ಥೆಗಳನ್ನೊಳಗೊಂಡ ಕಾರ್ಯಪಡೆ ರಚಿಸ ಲಾಗಿದೆ. ಈ ಕಾರ್ಯಪಡೆಯು ಎಲ್ಲ ಪಟಾಕಿ ಮಾರಾಟಗಾರರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಒಂದುವೇಳೆ ನಿಷೇಧಿತ ಪಟಾಕಿ ಕಂಡುಬಂದರೆ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಸುಪ್ರಿಂಕೋರ್ಟ್ ಆದೇಶದ ಪ್ರಕಾರ ದೀಪಾವಳಿ ಹಬ್ಬದ ಪ್ರಯುಕ್ತ ಅ.31 ರಿಂದ ನ.2ರವರೆಗೆ ರಾತ್ರಿ 8 ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ನಗರ ಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಹಸಿರು ಪಟಾಕಿ ಬಳಕೆ ಹಾಗೂ ಬಳಕೆಯ ಸಮಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ‘ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಹಾಗೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸಬೇಡಿ ಹಾಗೂ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗುವ ರೀತಿಯಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿ ಸಿಡಿಸುವ ಸಂದರ್ಭ ಹೊರಸೂಸುವ ಹೊಗೆಯಿಂದ ಅಸ್ತಮ ರೋಗಿಗಳು, ಹೃದ್ರೋಗಿಗಳು, ವಯೋವೃದ್ಧರು ಹಾಗೂ ಚಿಕ್ಕಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಕಡಿಮೆ ಮಾಲಿನ್ಯ ಮಾತ್ರ ಉಂಟು ಮಾಡುವ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಿ ಅಥವಾ ದೀಪ ಹಚ್ಚಿ ದೀಪಾವಳಿ ಆಚರಿಸಿ’ ಎಂದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಹಸಿರು ಪಟಾಕಿ ಎಂದರೇನು?

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಹಾಗೂ ನ್ಯಾಷನಲ್ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಇಇಆರ್‌ಐ) ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಎರಡೂ ಮಾಲಿನ್ಯ ಉಂಟು ಮಾಡುತ್ತವೆ. ಆದರೆ, ಹಸಿರು ಪಟಾಕಿ, ಸಾಮಾನ್ಯ ಪಟಾಕಿಗಿಂದ ಶೇ.30 ರಷ್ಟು ಕಡಿಮೆ ವಾಯುಮಾಲಿನ್ಯ ಮಾಡುತ್ತದೆ. ಹಸಿರು ಪಟಾಕಿ ಕಡಿಮೆ ಹೊಗೆ ಹೊರಸೂಸುತ್ತದೆ ಮತ್ತು ದೂಳು ಹೀರಿಕೊಳ್ಳುತ್ತದೆ. ಹಸಿರು ಪಟಾಕಿಯಲ್ಲಿ ಬೇರಿಯಂ ಮತ್ತು ನೈಟ್ರೇಟ್ ಇರುವುದಿಲ್ಲ. ಹಸಿರು ಪಟಾಕಿ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ನಿಷೇಧಿತ ಪಟಾಕಿಗಿಂತ ಹಸಿರು ಪಟಾಕಿ ಬಳಕೆ ಉತ್ತಮ.

ಹಸಿರು ಪಟಾಕಿ ಗುರುತಿಸುವುದು ಹೇಗೆ?

ಹಸಿರು ಪಟಾಕಿಗಳ ಪ್ಯಾಕ್ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಲೋಗೋ ಇರುತ್ತದೆ. ಅಲ್ಲದೆ, ಕ್ಯೂ ಆರ್ ಕೋಡ್ ಸ್ಕಾೃನ್ ಸಹ ಇರಲಿದೆ. ಈ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದರೆ ಹಸಿರು ಪಟಾಕಿ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಪಟಾಕಿ ಅಸಲಿಯೋ ಅಥವಾ ನಕಲಿಯೋ ಎಂಬುದು ತಿಳಿಯುತ್ತದೆ. ಪ್ರಾಮಾಣಿಕರಿಸಿದ ಹಸಿರು ಪಟಾಕಿಗಳ ಮೇಲೆ ಸಿಎಸ್‌ಐಆರ್ ಲೋಗೋ ಹಾಗೂ ಕ್ಯೂಆರ್ ಕೋಡ್ ಮುದ್ರಿಸುವುದು ಕಡ್ಡಾಯ. ಸದರಿ ಚಿಹ್ನೆಯ ಲೋಗೋ ಬಗ್ಗೆ ಸಂಬಂಧಿಸಿದ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳಬೇಕು. ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್‌ಗಳನ್ನು ರ‌್ಯಾಂಡಮ್‌ಆಗಿ ಪಡೆದು ಅವುಗಳ ಶಬ್ದ ಮಟ್ಟವನ್ನು ಕಾರ್ಯಪಡೆ ಮಾಪನ ಮಾಡಲಿದೆ. ನಿಗದಿತ ಗುಣಮಾಪನಗಳಿಗೆ ಸರಿ ಹೊಂದದಿದ್ದರೆ ಅಂತಹ ಪಟಾಕಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ದೀಪಾವಳಿ ಹಬ್ಬಕ್ಕೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡಬೇಕು. ಈ ಕುರಿತು ಪಟಾಕಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜನರು ಸಹ ಹಸಿರು ಪಟಾಕಿಗಳನ್ನು ಖಚಿತ ಪಡಿಸಿಕೊಂಡು ಖರೀದಿಸಬೇಕು. ನಿಷೇಧಿತ ಪಟಾಕಿಗಳಿಂದ ವಾತಾವರಣ ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಹಸಿರು ಪಟಾಕಿ ಬಳಕೆಯ ಕಡೆಗೆ ಗಮನ ಹರಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಗರ ಪಾಲಿಕೆಯಿಂದ ಮಾಡಲಾಗಿದೆ.

ಆಸಾದ್ ಉರ್ ರೆಹಮಾನ್ ಷರೀಫ್, ನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net