

ಉಡುಪಿ: ದೀಪಾವಳಿಯಲ್ಲಿ ಎಲ್ಲರ ಮನೆಯಲ್ಲಿ ಆಕಾಶದೀಪ ಬೆಳಗಿಸಲಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರೇವಾಹಿ ದೀಪಗಳು ಕಾಣಸಿಗುತ್ತವೆ. ಪರ್ಕಳದಲ್ಲಿ ಯುವಕನೊಬ್ಬ ತೆಂಗಿನ ಮರದ ಪಚ್ಚೆಬಣ್ಣದಗರಿ ಹಳದಿ ಬಣ್ಣದ ಸಿರಿಬಳಸಿ ರಚಿಸಿದ ಪರಿಸರ ಸ್ನೇಹಿ ಗೂಡುದೀಪ ಎಲ್ಲರ ಗಮನಸೆಳೆಯುತ್ತಿದೆ.
ಪರ್ಕಳ ನಿವಾಸಿ ಶ್ರವಣ್ ನಾಯಕ್ ಕೈಚಳದಲ್ಲಿ ಮೂಡಿದ ಗೂಡುದೀಪ ಮೆಚ್ಚುಗೆಗೆ ಪಾತ್ರವಾಗಿದೆ. ಹಚ್ಚ ಹಸಿರು ಪಚ್ಚೆ ಹಸಿರಿನ ತೆಂಗಿನಮರದ ಗರಿ ಮತ್ತು ತೆಂಗಿನಮರದ ಹಳದಿ ಬಣ್ಣದಸಿರಿಯನ್ನು ಬಳಸಿ ಚತುರ್ಭುಜಾಕೃತಿಯ ಮಂಟಪದಲ್ಲಿ ಗೂಡು ದೀಪ ರಚಿಸಲಾಗಿದೆ. ಇದಕ್ಕಾಗಿ ಅವರು ಮನೆಯ ತೋಟದ ತೆಂಗಿನ ಮರದ ಗರಿಗಳನ್ನು ಬಳಸಿದ್ದಾರೆ. ಈ ಗೂಡು ದೀಪವನ್ನು ಮೂರ್ನಾಲ್ಕು ದಿನ ಬಳಸಬಹುದು.
ಉಡುಪಿಯ ನ್ಯೂ ಸಿಟಿ ನರ್ಸಿಂಗ್ ಕಾಲೇಜಿನ ಬಿ.ಎಸ್ ನರ್ಸಿಂಗ್ ವಿದ್ಯಾರ್ಥಿಯಾದ ಶ್ರವಣ್ ನಾಯಕ್ ಕಾಲೇಜಿನಲ್ಲಿ ನಡೆದ ಗೂಡುದೀಪ ಸ್ವರ್ಧೆಯಲ್ಲಿ ದ್ವೀತಿಯ ಸ್ಥಾನ ಕೂಡ ಪಡೆದಿದ್ದಾರೆ.
ಪರಿಸರ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹಸಿರುಪಟಾಕಿಗಳನ್ನೇ ಬಳಸಿ ಎನ್ನುವ ಕಾಲಘಟ್ಟದಲ್ಲಿಯೇ ಪರಿಸರ ಸ್ನೇಹಿ ಗೂಡುದೀಪಗಳಿಗೆ ಹೆಚ್ಚಿನ ಮಹತ್ವ ಲಭಿಸಬೇಕಿದೆ.