ರಫ್ತು ಕೇಂದ್ರದ ಕಟ್ಟಡಕ್ಕೆ ಗ್ರಹಣ

expot
Published on

ಆರ್.ಕೃಷ್ಣ ಮೈಸೂರು

ರಫ್ತು ಉತ್ತೇಜನಕ್ಕಾಗಿ ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ರಫ್ತು ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಹೆಬ್ಬಾಳು ಕೈಗಾರಿಕಾ ಪ್ರದೇಶದ ಶೇಷಾದ್ರಿಪುರಂ ಕಾಲೇಜು ಬಳಿ ಸುಮಾರು ಅರ್ಧ ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಿ 2014ರ ಜೂನ್ 28ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತಾದರೂ ಕಟ್ಟಡ ಮಾತ್ರ ಇನ್ನೂ ಮೇಲೆದ್ದಿಲ್ಲ.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೈಸೂರಿನ ಕೈಗಾರಿಕೆಗಳಿಗೆ ಪೂರಕವಾಗಿ ರಫ್ತು ಕೇಂದ್ರ ಸ್ಥಾಪಿಸಬೇಕು ಎನ್ನುವ ಉದ್ಯಮಿಗಳ ಸತತ ಹೋರಾಟದ ಫಲವಾಗಿ ರಫ್ತು ಕೇಂದ್ರ ಸ್ಥಾಪಿಸಿ ಅದಕ್ಕೆ ‘ವಿಶ್ವೇಶ್ವರಯ್ಯ ರಫ್ತು ಉತ್ತೇಜನಾ ಕೇಂದ್ರ’ ಎಂದು ನಾಮಕರಣ ಕೂಡ ಮಾಡಲಾಗಿದೆ. ಆದರೆ ಕೇಂದ್ರಕ್ಕೊಂದು ಕಟ್ಟಡ ನಿರ್ಮಿಸಬೇಕು ಎನ್ನುವ ಉದ್ಯಮಿಗಳ ಕೋರಿಕೆ ಮಾತ್ರ ದಶಕ ಕಳೆಯುತ್ತಿದ್ದರೂ ಈಡೇರಿಲ್ಲ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಕಾಲದಲ್ಲಿಯೇ ದೇಶ, ವಿದೇಶದಲ್ಲಿ ಮೈಸೂರು ವಾಣಿಜ್ಯ ಸಂಬಂಧ ಬೆಳೆದಿತ್ತು. ಇಲ್ಲಿನ ಶ್ರೀಗಂಧದ ಎಣ್ಣೆ, ಸುಗಂಧ ಎಣ್ಣೆ, ಬೀಟೆ, ತೇಗ, ಶ್ರೀಗಂಧ ಸಹಿತ ಅಪರೂಪ ಜಾತಿಯ ವೃಕ್ಷಗಳಿಂದ ತಯಾರಿಸಿದ ಕರಕುಶಲ ವಸ್ತುಗಳು, ರೇಷ್ಮೆ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದರೂ ಇಲ್ಲಿಯವರೆಗೂ ರಫ್ತು ವಹಿವಾಟು ಉತ್ತೇಜಿಸುವಂಥ ಯಾವುದೇ ಮೂಲಸೌಲಭ್ಯಗಳು ಈ ಭಾಗದಲ್ಲಿ ಇರಲಿಲ್ಲ. ಈಗ ಕೇಂದ್ರ ಸ್ಥಾಪನೆಗೆ ನಾಂದಿಯಾದರೂ ಆಡಳಿತ ನಡೆಸುವವರ ಇಚ್ಛಾಶಕ್ತಿ ಕೊರತೆಯಿಂದ ಕಟ್ಟಡ ಪೂರ್ಣಗೊಂಡಿಲ್ಲ.

ಕೇಂದ್ರ ನಿರ್ಮಾಣಕ್ಕೆ 8 ಕೋಟಿ ರೂ. ಪಟ್ಟಿ:

ರಫ್ತು ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 8 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಲಾಗಿತ್ತು. 3 ಕೋಟಿ ರೂ. ಅನ್ನು ಕೇಂದ್ರ ಸರ್ಕಾರ, 4 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಹಾಗೂ ಒಂದು ಕೋಟಿ ರೂ.ಅನ್ನು ಮೈಸೂರು ಕೈಗಾರಿಕೋದ್ಯಮಿಗಳು ಭರಿಸಲು ನಿರ್ಧರಿಸಲಾಗಿತ್ತು.

ಕೇಂದ್ರ ಸರ್ಕಾರ ತನ್ನ ಪಾಲಿನ 3 ಕೋಟಿ ರೂ. ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಆದರೆ ರಾಜ್ಯ ಸರ್ಕಾರ ಪಾಲಿನ 4 ಕೋಟಿ ರೂ.ಗಳಲ್ಲಿ ಒಂದು ಕೋಟಿ ರೂ.ಅನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿಕೆ 3 ಕೋಟಿ ರೂ. ಬಿಡುಗಡೆ ಮಾಡಲು ವಿಳಂಬ ಮಾಡಿದೆ. ಕೈಗಾರಿಕೋದ್ಯಮಿಗಳ ಪಾಲಿನ ಒಂದು ಕೋಟಿ ರೂ. ನಲ್ಲಿ 50 ಲಕ್ಷ ರೂ. ನೀಡಲಾಗಿದೆ. ಈ ಹಣದಲ್ಲಿ ಗುತ್ತಿಗೆದಾರ ಕಟ್ಟಡ ತಳಮಟ್ಟದ ಕಾಮಗಾರಿಯನ್ನು ನಿರ್ಮಿಸಿದ್ದು, ಉಳಿಕೆ ಕಾಮಗಾರಿ ನಡೆಸಲು ನಷ್ಟದ ಕಾರಣ ನೀಡಿ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಕಟ್ಟಡ ಕಾಮಗಾರಿ ಆರಂಭಿಕ ಹಂತದಲ್ಲಿಯೇ ನಿಂತಿದೆ.

ಬೆಲೆ ಏರಿಕೆಯಿಂದ ಕಾಮಗಾರಿ ಸ್ಥಗಿತ:

ಕಾಮಗಾರಿ ವಿಳಂಬದಿಂದ ಈಗ ಕಟ್ಟಡ ನಿರ್ಮಾಣದ ವೆಚ್ಚ ದುಬಾರಿಯಾಗಿದೆ. 8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಶಂಕುಸ್ಥಾಪನೆಗೊಂಡ ಕಟ್ಟಡದ ಕಾಮಗಾರಿ ಈಗ 12 ಕೋಟಿ ರೂ.ಆಗುವ ನಿರೀಕ್ಷೆ ಇದೆ.

ಕಟ್ಟಡ ನಿರ್ಮಾಣ ಹಂತದಲ್ಲಿಯೇ ಸಿಮೆಂಟ್, ಕಬ್ಬಿಣ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದರಿಂದ ಗುತ್ತಿಗೆದಾರರು ಅರ್ಧದಲ್ಲಿಯೇ ಕಾಮಗಾರಿ ನಿಲ್ಲಿಸಿದ್ದಾರೆ. ಹಲವು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಈಗ ಯೋಜನಾ ವೆಚ್ಚವೂ ಏರಿಕೆಯಾಗಿದೆ.

ಹಾಗಾಗಿ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ತನ್ನ ಪಾಲಿನ 3 ಕೋಟಿ ರೂ. ಜತೆಗೆ ಮತ್ತೆ 3 ಕೋಟಿ ರೂ. ನೀಡಬೇಕು. ಉಳಿದ ಹಣವನ್ನು ಕೈಗಾರಿಕೋದ್ಯಮಿಗಳು ಸಂಗ್ರಹಿಸಿ ಕಟ್ಟಡ ಪೂರ್ಣಗೊಳಿಸಲು ಚಿಂತನೆಯಲ್ಲಿ ಇದ್ದಾರೆ.

ಒಂದೇ ಸೂರಿನಡಿ ಉದ್ಯಮಿಗಳಿಗೆ ಸೌಲಭ್ಯ

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಂಜೂರು ಮಾಡಿರುವ 2019 ಚದರ ಮೀಟರ್ ನಿವೇಶನದಲ್ಲಿ ರಫ್ತು ಕೇಂದ್ರ ನಿರ್ಮಾಣವಾಗುತ್ತಿದೆ.

ನಾಲ್ಕು ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಅದರಲ್ಲಿ ರಫ್ತು, ಆಮದು ನೀತಿಗೆ ಸಂಬಂಧಿಸಿದಂತೆ ನಿಯಮಗಳು, ಯೋಜನೆಗಳು, ಕಾರ್ಯಕ್ರಮಗಳು, ವಿಶ್ವಮಟ್ಟದ ಅವಕಾಶಗಳು, ದ್ವಿಪಕ್ಷೀಯ ವಹಿವಾಟು, ಒಪ್ಪಂದಗಳು ಇತ್ಯಾದಿ ಕುರಿತ ಮಾಹಿತಿ ಡೆಸ್ಕ್, ಉದ್ಯಮಿ ಸ್ನೇಹಿ ಯೋಜನೆ ಅನುಷ್ಠಾನಕ್ಕೆ ವಿಶೇಷ ವಿಭಾಗ, ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ಗುಣಮಟ್ಟ ಪರೀಕ್ಷಾ ಕೇಂದ್ರಗಳು, ಕೈಗಾರಿಕೋತ್ಪನ್ನಗಳ ಪ್ರದರ್ಶನ ವಿಭಾಗ, ತರಬೇತಿ ಕೇಂದ್ರ, ಗ್ರಂಥಾಲಯ, ವಾಚನಾಲಯ ಮತ್ತು ಮಾಹಿತಿ ಸಂಗ್ರಹಾಗಾರ, ಉಪ ಗುತ್ತಿಗೆ ವಿನಿಮಯ ಸೌಲಭ್ಯ, ವಿವಿಧ ಇಲಾಖೆಗಳ ನೆರವು ಡೆಸ್ಕ್, ವಿಚಾರ ಸಂಕಿಣ, ಸಮ್ಮೇಳನ ಸಭಾಂಗಣ ಸೇರಿದಂತೆ ಉದ್ಯಮ ಬೆಳೆವಣಿಗೆ ಪೂರಕವಾದ ವಿಭಾಗಗಳು ಒಂದೇ ಸೂರಿನಡಿ ದೊರೆತಂತಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಘೋಷಣೆ ಮಾಡಿದ್ದ ರಫ್ತುಕೇಂದ್ರ ನನೆಗುದಿಗೆ ಬಿದ್ದಿದೆ. ಒಂದು ಕೋಟಿ ರೂ. ಅನುದಾನ ನೀಡಿ ಈ ಕೇಂದ್ರ ನಿರ್ಮಾಣಕ್ಕೆ ಮರು ಚಾಲನೆ ನೀಡಬೇಕು. ಕೈಗಾರಿಕಾ ಕ್ಲಸ್ಟರ್ ಸ್ಥಾಪನೆಗೆ ನಿವೇಶನ ನೀಡಬೇಕು. ವರ್ಷಕ್ಕೆ 40ರಿಂದ 45 ಕೋಟಿ ರೂ. ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ನೀಡುತ್ತಿದ್ದರೂ ಕೈಗಾರಿಕೆ ಅಭಿವೃದ್ಧಿಗೆ ಕ್ರಮ ವಹಿಸುತ್ತಿಲ್ಲ.

ಸುರೇಶ್‌ಕುಮಾರ್ ಜೈನ್

ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net