

ಮಡಿಕೇರಿ:
ಲೋಕೋಪಯೋಗಿ ಇಲಾಖೆಯಲ್ಲಿ ಇಂಥ ಕೆಟ್ಟ ಆಡಳಿತ ಎಲ್ಲಿಯೂ ನೋಡಿಲ್ಲ. ಕೊಡಗಿನಂತಹ ಪ್ರಜ್ಞಾವಂತರ ಜಿಲ್ಲೆಯಲ್ಲೇ ಹೀಗೆ ಆಗಬೇಕಾದರೆ ಬೇರೆ ಕಡೆ ಇನ್ನು ಹೇಗಿರಬಹುದು?, ಇದು ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಬೇಸತ್ತು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹೊರಹಾಕಿದ ಅಭಿಪ್ರಾಯ.
ಇದು ಕೇವಲ ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ಕಂಡು ಬರುವ ಸಮಸ್ಯೆ ಅಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳದ್ದೂ ಇದೇ ಕತೆ. ಎಲ್ಲಾ ಊರಿನಲ್ಲೂ ಅರ್ಧಂಬರ್ಧ ಕೆಲಸ ಮುಗಿದಿರುವ ಕಟ್ಟಡ, ಸೇತುವೆ, ತಡೆಗೋಡೆ ನಿರ್ಮಾಣಗಳನ್ನು ಕಾಣಬಹುದು. ಕೆಲವೊಂದು ಕಾಮಗಾರಿಗಳು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಆಮೆಗಿಂತಲೂ ನಿಧಾನವಾಗಿ ತೆವಳುತ್ತಿದೆ.
ಹಾಗೆಂದು ಕಾಮಗಾರಿಗಳಿಗೆ ಅನುದಾನ ಕೊರತೆಯ ನೆಪ ಹೇಳುವಂತಿಲ್ಲ. ಮಡಿಕೇರಿಯಲ್ಲಿ ಇನ್ನೂ ಪೂರ್ಣವಾಗದ ಕನ್ನಡಭವನ ಕಾಮಗಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆಯಲ್ಲಿ ಹಣ ಇದೆ. ಆದರೆ ಕೆಲಸ ಮಾತ್ರ ನಡೆಯುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದು ಸಾಮಾನ್ಯ ಆರೋಪವಾಗಿದೆ.
ಕೊಡಗಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ಯಾವ ಸಭೆ ನಡೆದರೂ ಮೊದಲು ಪ್ರಸ್ತಾಪ ಆಗುವುದೇ ಜಿಲ್ಲೆಯ ಅಪೂರ್ಣ ಕಾಮಗಾರಿಗಳ ವಿಷಯ. ಇಂಥ ಸಭೆಗಳಿಗೆ ಹಿರಿಯ ಅಧಿಕಾರಿಗಳು ಚಕ್ಕರ್ ಹೊಡೆದು, ಕಿರಿಯ ಅಧಿಕಾರಿಗಳಿಂದ ಉತ್ತರ ಹೇಳಿಸಿ ಸಭೆಯ ಮಟ್ಟಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ಸಭೆಯಲ್ಲೂ ಅಧಿಕಾರಿಗಳು ಒಂದೇ ಉತ್ತರ ಕೊಟ್ಟು ಜನಪ್ರತಿನಿಧಿಗಳ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅನುಪಾಲನ ವರದಿಯಲ್ಲೂ ಅಡ್ಡಗೋಡೆ ಮೇಲೆ ದೀಪ ಇಟ್ಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಕಾಣಬಹುದಾಗಿದೆ.
ಅಧಿಕಾರಿಗಳ ಇಂಥ ಕಳ್ಳಾಟಕ್ಕೆ ಕಡಿವಾಣ ಹಾಕಿ ಅಭಿವೃದ್ಧಿ ಕೆಲಸಕ್ಕೆ ಚುರುಕು ಮುಟ್ಟಿಸಲು ಹಾಲಿ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ದೃಢ ಸಂಕಲ್ಪ ಮಾಡಿದಂತಿದೆ. ಜಿಲ್ಲೆಯ ಇಬ್ಬರು ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಕೂಡ ಉಸ್ತುವಾರಿ ಸಚಿವರ ಜತೆಗೆ ನಿಂತಿದ್ದು ಅಪೂರ್ಣ ಕಾಮಗಾರಿಗಳಿಗೆ ಮುಕ್ತಿ ದೊರಕಿಸಲು ಮುಂದಾಗಿದ್ದಾರೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಚಳಿ ಬಿಡಿಸಿದ್ದ ಸಚಿವ ಬೋಸರಾಜು ಮತ್ತು ಇಬ್ಬರು ಶಾಸಕರು ಈ ಬೆನ್ನಲ್ಲೇ ಜಿಲ್ಲೆಯ ಉನ್ನತ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದಾರೆ. ನಿಂತಿರುವ, ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನೂ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲೂ ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅಡ್ಡಿಯಾಗಿರುವ ಅಂಶಗಳನ್ನು ತೆರವು ಮಾಡಿ ದಾರಿ ಸುಗಮಗೊಳಿಸಿ ಕೊಡುವ ಪ್ರಯತ್ನ ನಡೆಸಿದ್ದಾರೆ.
ಇಂಥ ಕ್ರಮಗಳಿಂದ ಕೆಲವೊಂದು ಆಶಾದಾಯಕ ಬೆಳೆವಣಿಗೆಗಳು ಕಂಡುಬಂದಿದ್ದು, ಇನ್ನು ಮುಂದೆಯಾದರೂ ಜಿಲ್ಲೆಯ ಕಾಮಗಾರಿಗಳಿಗೆ ವೇಗ ಸಿಗಬಹುದು ಎನ್ನುವುದು ಜಿಲ್ಲೆಯ ಜನತೆಯ ನಿರೀಕ್ಷೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.
ಸರ್ಕಾರದಿಂದ ಅನುದಾನ ಬಿಡಗಡೆಯಾಗಿದ್ದರೂ ಕಳೆದ ಹತ್ತು ವ?ರ್ದಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಅಧಿಕಾರಿಗಳ ಬೇಜಾವಬ್ದಾರಿಯಿಂದ ಮಂದಗತಿಯಲ್ಲಿ ಸಾಗುತ್ತಿರುವುದು ದುರಂತ. ನೂತನ ಶಾಸಕರು ಮತ್ತು ಉಸ್ತುವಾರಿ ಸಚಿವರು ಪಾದರಸದಂತೆ ಜಿಲ್ಲೆಯ ಮೂಲೆ ಮೂಲೆಯನ್ನು ಸುತ್ತುತಿದ್ದು ಈಗಾಗಲೇ ಮಂದಗತಿಯಲ್ಲಿ ಸಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಸೂಚಿಸಿದ್ದಾರೆ. ಅನುದಾನ ಬಿಡುಗಡೆಯಾಗಿ ಮುಗಿಯದ ಕಾಮಗಾರಿಗಳು ಇನ್ನಾದರೂ ಬೇಗ ಮುಗಿಯುವಂತಾಗಲಿ.
ಭರತ್, ಕೃಷಿಕ, ಹುಲುಸೆ, ಹಂಡ್ಲಿ.
ಜಿಲ್ಲೆಯಲ್ಲಿ ಬಹಳ?್ಟು ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಆರಂಭವಾಗಿ ಎ?್ಟೋ ವ?ರ್ಗಳು ಕಳೆದರೂ ಇನ್ನೂ ಪೂರ್ಣಗೊಳ್ಳದೆ ಬಾಕಿ ಇದೆ. ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲ. ಇದರಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೂ ಕುಂಠಿತವಾಗುತ್ತದೆ. ಆದ?್ಟು ಬೇಗ ಇನ್ನಾದರೂ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿ.
ಮೈನಾ ನಾಯರ್, ಗೋಣಿಕೊಪ್ಪ
ಕೊಡಗಿನ ಕುಶಾಲನಗರದಲ್ಲಿ ಕಲಾ ಮಂದಿರ, ಸಾರಿಗೆ ಬಸ್ ಡಿಪೋ, ಯುಜಿಡಿ, ಹಾರಂಗಿಯಿಂದ ಕುಶಾಲನಗರಕ್ಕೆ ೨೪*೭ ಕುಡಿಯುವ ನೀರಿನ ಯೋಜನೆ, ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದು, ಒಳಾಂಗಣ ಕ್ರೀಡಾಂಗಣ, ಮಿನಿ ವಿಧಾನಸೌಧ ಹೀಗೆ ಹಲವಾರು ಯೋಜನೆಗಳು ಆರಂಭವಾಗಿ ದಶಕಗಳು ಕಳೆದಿದೆ. ಯಾರೂ ಮಾಡಿಲ್ಲ ಎನ್ನುವುದಕ್ಕಿಂತ ಹೂಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಕುಶಾಲನಗರ ಜನತೆ ಒತ್ತಡ ಹಾಕಿ ಮಾಡಿಸುವ ವಿಶ್ವಾಸವಿದೆ.
ನವೀನ್, ಚಿಕ್ಕತ್ತೂರು, ಕುಶಾಲನಗರ.
ಕಟ್ಟಡ ಕಾಮಗಾರಿಗಳು ವಿಳಂಬವಾದರೆ ಸರ್ಕಾರ ಹಣ ಪೋಲಾಗುತ್ತದೆ. ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಸೋಮವಾರಪೇಟೆಯಲ್ಲಿ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳ ಕನಸಿನ ಕೂಸು ಶತಮಾನೋತ್ಸವ ಭವನ ಕಾಮಗಾರಿ ಕೆಲ ರಾಜಕೀಯ ದ್ವೇಷದಿಂದ ವಿಳಂಬವಾಗಿದೆ. ಈ ಬಾರಿ ಶಾಸಕರಾದ ಮಂತರ್‌ಗೌಡ ಅವರಿಗೆ ಮುಂದುವರಿದ ಕಾಮಗಾರಿಗೆ ಹಣ ಒದಗಿಸುವಂತೆ ಮನವಿ ಮಾಡಿದ್ದೇವೆ. ಕನಸು ಈಡೇರುವ ವಿಶ್ವಾಸವಿದೆ.
ಶೀಲಾ ಡಿಸೋಜ, ಪಟ್ಟಣ ಪಂಚಾಯಿತಿ ಸದಸ್ಯೆ, ಸೋಮವಾರಪೇಟೆ
ಚುನಾವಣಾ ಸಂದರ್ಭ ಅನೇಕ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯುತ್ತವೆ. ನಂತರ ಸರ್ಕಾರಗಳು ಬದಲಾದರೆ, ಅರ್ಧಂಬರ್ಧ ಕಾಮಗಾರಿಗಳು ನಡೆಯುವುದಿಲ್ಲ. ಹೊಸ ಸರ್ಕಾರಗಳು ಅವಶ್ಕವಿರುವ ಕಾಮಗಾರಿಗಳಿಗೆ ರಾಜಕೀಯ ರಹಿತವಾಗಿ ಅನುದಾನ ಕಲ್ಪಿಸಿ, ಕಾಮಗಾರಿ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಬೇಕು.
ಎಸ್.ಈ. ಪ್ರಕಾಶ್, ಕಾಫಿ ಬೆಳೆಗಾರ, ತಾಕೇರಿ ಗ್ರಾಮ
ನಮ್ಮ ಭಾಗದಲ್ಲಿ ಕಳೆದ ೬ ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಗ್ರಾಮೀಣ ರಸ್ತೆ ಕಾಮಗರಿ, ಪ.ಜಾ., ಪ.ಪಂ. ಕಾಲೋನಿಗಳಿಗೆ ರಸ್ತೆ, ಯಾವುದೇ ಹೊಸ ಕಟ್ಟಡ ಕಾಮಗಾರಿ ಶುರುವಾಗಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿದೆ.
ಚಂಡೀರ ಜಗದೀಶ್, ಮಾಜಿ ಸದಸ್ಯ, ಕುಂಜಿಲ - ಕಕ್ಕಬೆ ಗ್ರಾಮ ಪಂಚಾಯತಿ
ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಉನ್ನತಾಧಿಕಾರಿಗಳು, ಸರ್ಕಾರದಿಂದ ನೂತನವಾಗಿ ನೇಮಕವಾಗಿರುವ ತಾಲೂಕು ಉಸ್ತುವಾರಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆದ?್ಟು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಸುವಂತೆ ಕಡಕ್ ನಿರ್ದೇಶನ ನೀಡಲಾಗಿದೆ.
ಎನ್.ಎಸ್. ಬೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ
ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಮುಗಿಯಲು ಇನ್ನೆಷ್ಟು ಸಮಯ ಬೇಕಾಗುತ್ತದೆ ಎನ್ನುವ ಪ್ರಶ್ನೆಗೆ ಇನ್ನು ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ಪ್ರತಿ ಸಭೆಯಲ್ಲೂ ಅಧಿಕಾರಿಗಳು ಉತ್ತರಿಸುತ್ತಾ ಬರುತ್ತಿದ್ದಾರೆ. ಸಾರ್ವಜನಿಕರಿಗೆ ಜನಪ್ರತಿನಿಧಿಗಳು ಏನು ಉತ್ತರ ಕೊಡಬೇಕು ? ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ,, ಉಪಮುಖ್ಯಮಂತ್ರಿ ಬರುತ್ತಾರೆ. ಅದಕ್ಕೆ ದಿನಾಂಕ ನಿಗದಿ ಮಾಡಬೇಕು. ಆದರೆ ಕಾಮಗಾರಿ ಮಾತ್ರ ಇನ್ನೂ ಪೂರ್ಣವಾಗುತ್ತಿಲ್ಲ.
ಎ.ಎಸ್. ಪೊನ್ನಣ್ಣ. ಶಾಸಕ, ವಿರಾಜಪೇಟೆ ಕ್ಷೇತ್ರ
ಮಡಿಕೇರಿಯಲ್ಲಿ ೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕನ್ನಡ ಸಮುಚ್ಛಯ ಭವನ ಕಾಮಗಾರಿ ೯ ವರ್ಷ ಆದರೂ ಪೂರ್ತಿ ಆಗಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಕೆಲಸಗಳು ನೆಟ್ಟಗೆ ನಡೆಯುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಗೆ ೩ ತಿಂಗಳಿಗೊಮ್ಮೆ ಹೊಸ ಟಾರ್ಪಲ್ ಹೊದಿಸುವುದು ಬಿಟ್ಟರೆ ಇನ್ನೇನೂ ಆಗುತ್ತಿಲ್ಲ.
ಡಾ. ಮಂತರ್ ಗೌಡ, ಶಾಸಕ, ಮಡಿಕೇರಿ ಕ್ಷೇತ್ರ