ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಗ್ರಹಣ

Indira
Published on

ಎ.ಅಪ್ಪಾಜಿಗೌಡ, ಮುಳಬಾಗಿಲು

ದಶಕಗಳೇ ಕಳೆದರೂ ಮುಳಬಾಗಿಲಿನಲ್ಲಿ ಆರಂಭವಾಗಬೇಕಾದ ಇಂದಿರಾ ಕ್ಯಾಂಟೀನ್‌ಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಟ್ಟಡ ನಿರ್ವಾಣವಾದರೂ ಕ್ಯಾಂಟೀನ್ ಆರಂಭವಾಗದೆ ಪಾಳು ಕೊಂಪೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಹಗರಣದಲ್ಲಿ ಕಟ್ಟಡದ ಸುತ್ತಮುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ ವಾಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ.

2017ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೂಲಕ ಅಂದಿನ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರು ಇಂದಿರಾ ಕ್ಯಾಂಟೀನ್ ಮಂಜೂರು ವಾಡಿಸಿದ್ದು, ಆ ಸಮಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆಯಾದ್ದರಿಂದ ಕಾಮಗಾರಿ ಪೂಜೆ ನೆರವೇರಲಿಲ್ಲ. ನಂತರ ಎಚ್.ನಾಗೇಶ್ ಅವರು ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದರು. ಜಿಲ್ಲಾ ಪಂಚಾಯಿತಿ ತಾಂತ್ರಿಕ ಎಇಇ ಕಚೇರಿಯ ಆವರಣದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭಕ್ಕೆ ಭೂಮಿಪೂಜೆ ನೆರವೇರಿಸಿದರು. ಆದರೆ ಕಾಮಗಾಗಿ ಪಾಯಮಟ್ಟದಲ್ಲೇ ನಿಂತು ಹೋಯಿತು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಎಚ್.ನಾಗೇಶ್ ಅವರು ಸಚಿವರಾದರೂ ಇಂದಿರಾ ಕ್ಯಾಂಟೀನ್ ಕಟ್ಟಡ ಮೇಲೇಳಲಿಲ್ಲ.

ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಸರ್ಕಾರಿ ಕಚೇರಿಗಳು, ಆಂಜನೇಯಸ್ವಾಮಿ ದೇವಾಲಯ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಪಂ ತಾಂತ್ರಿಕ ಉಪವಿಭಾಗ ಕಚೇರಿ, ಅಂಚೆ ಕಚೇರಿ, ಪೊಲೀಸ್ ಡಿವೈಎಸ್ಪಿ ಉಪ ವಿಭಾಗದ ಕಚೇರಿ, ತಾಲೂಕು ಕಚೇರಿ, ಉಪ ಖಜಾನೆ, ಉಪ ನೋಂದಣಿ ಅಧಿಕಾರಿಗಳ ಕಚೇರಿ, ತಾಪಂ ಕಾರ್ಯಾಲಯ, ಕೃಷಿ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿವೆ. ಇಂದಿರಾ ಕ್ಯಾಂಟೀನ್ ಆರಂಭಗೊಂಡರೆ ಇಲ್ಲಿಗೆ ಬರುವ ಸಾರ್ವನಿಕರಿಗೆ ಅನುಕೂಲವಾಗಲಿದೆ.

ಗಮನ ಸೆಳೆದಿದ್ದ ವಿಜಯವಾಣಿ: ಈ ಬಗ್ಗೆ 2023 ರ ಡಿ.20 ರಂದು ವಿಜಯವಾಣಿ ಪತ್ರಿಕೆಯಲ್ಲಿ ದಶಕಗಳೇ ಕಳೆದರೂ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದ ತಾಣ, ಬಡಜನರಿಗೆ ಸಿಗುವುದೇ ರಿಯಾಯಿತಿ ಊಟ, ನೆನೆಗುದ್ದಿಗೆ ಬಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಬಗ್ಗೆ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಸರ್ಕಾರ ಕಾಮಗಾರಿ ಆರಂಭಿಸಿದ್ದು ಎರಡೇ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಈ ಬಗ್ಗೆ 2024ರ ಫೆ.28 ರಂದು ವಿಜಯವಾಣಿ ಪತ್ರಿಕೆಯಲ್ಲಿ ಕಟ್ಟಡ ಕಾಮಗಾರಿ ಪೂರ್ಣ, ಕಚೇರಿ ಕೆಲಸಗಳಿಗೆ ಬರುವ ಜನತೆಗೆ ಅನುಕೂಲ, ಶ್ರೀವೇ ಇಂದಿರಾ ಕ್ಯಾಂಟೀನ್ ಸೇವೆ ಆರಂಭ ಎಂದು ವರದಿ ಪ್ರಕಟಿಸಲಾಗಿತ್ತು. ನಂತರ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮೈಮರೆತ ಕಾರಣ ಕಟ್ಟಡ ನಿರ್ವಾಣವಾದರೂ ಕ್ಯಾಂಟೀನ್ ಆರಂಭವಾಗದೆ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಇನ್ನು ಸರ್ಕಾರದಲ್ಲಿ ಅನುದಾನ ಕೊರತೆ ಕಾರಣವೋ ಏನೋ ಎಂಬುದನ್ನು ತಿಳಿಯಬೇಕಿದೆ.

ಉದ್ದೇಶಿತ ಯೋಜನೆ ಸಾರ್ಥಕವಾಗುವುದೇ?: ಸರ್ಕಾರಗಳು ಬದಲಾದರೂ ಸರ್ಕಾರದ ಯೋಜನೆಗಳು ಮಾತ್ರ ಮೂಲೆಗುಂಪಾಗುತ್ತವೆ ಎಂಬುದು ಸರ್ವೇಸಾವಾನ್ಯ. ಆದರೆ, ಯೋಜನೆ ಆರಂಭಿಸಿದ ಕಾಂಗ್ರೆಸ್ ಸರ್ಕಾರವೇ ಮತ್ತೊಮ್ಮೆ ಅಧಿಕಾರದಲ್ಲಿದ್ದರೂ ಮುಳಬಾಗಿಲು ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇನ್ನಾದರೂ ಆಳುವ ಸರ್ಕಾರ, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಆಡಳಿತ ಇತ್ತ ಗಮನಹರಿಸಿ ಉದ್ದೇಶಿತ ಯೋಜನೆ ಅನುಷ್ಠ್ಠಾನಗೊಳಿಸಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ, ಬಡವರಿಗೆ ರಿಯಾಯಿತಿ ದರದ ಊಟ ಎಷ್ಟು ದಿನದಲ್ಲಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಂಟೀನ್ ನಡೆಸಲು ರಾಜ್ಯಮಟ್ಟದಲ್ಲೇ ಟೆಂಡರ್ ಆಗಬೇಕಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಮತ್ತೊಮ್ಮೆ ಪತ್ರ ಬರೆಯುವೆ. ಜತೆಗೆ ಶ್ರೀದಲ್ಲೇ ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ ವಹಿಸಲಾಗುವುದು. - ಸಮೃದ್ಧಿ ವಿ.ಮಂಜುನಾಥ್ ಶಾಸಕ, ಮುಳಬಾಗಿಲು ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣವಾಗಿದ್ದು, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಲಾಗುವುದು. ಕ್ಯಾಂಟೀನ್‌ಗೆ ಬೇಕಾಗಿರುವ ಅಡುಗೆ ಪಾತ್ರೆ, ಸಾಮಗ್ರಿಗಳು ಟೆಂಡರ್ ಮೂಲಕವೇ ಆಗಬೇಕಾಗಿದೆ. ಮೇಲಾಧಿಕಾರಿಗಳಿಗೆ ವಾಹಿತಿ ನೀಡಲಾಗುವುದು. - ವಿ.ಶ್ರೀಧರ್ ಪೌರಾಯುಕ್ತ, ನಗರಸಭೆ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net