

ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಶಕಗಳಿಂದ ನಿವೇಶನ ಹಂಚಿಕೆಗೆ ಗ್ರಹಣ ಹಿಡಿದಿದ್ದು ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ ಬಡವರ, ನಿರ್ಗತಿಕರ, ಗುಡಿಸಲುವಾಸಿಗಳ ಸ್ವಂತ ಸೂರಿನ ಕನಸು ಗಗನ ಕುಸುಮವಾಗಿಯೇ ಉಳಿದಿದೆ.
ಸರ್ಕಾರಗಳೇನೋ ಗುಡಿಸಲುಮುಕ್ತ ಸಮಾಜಕ್ಕಾಗಿ ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸುತ್ತವೆ. ಆದರೆ, ಜನಪ್ರತಿನಿಧಿಗಳ ಹಗ್ಗ ಜಗ್ಗಾಟ ಹಾಗೂ ಬೇಜವಾಬ್ದಾರಿಯಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ.. ಇದಕ್ಕೆ ಲಕ್ಷ್ಮೇಶ್ವರದಲ್ಲಿ ಆಶ್ರಯ ಯೋಜನೆ ನನೆಗುದಿಗೆ ಬಿದ್ದಿರುವುದೇ ಸಾಕ್ಷಿ...
2014ರಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅವಧಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ನೀಡುವ ಉದ್ದೇಶದಿಂದ 16 ಎಕರೆ 16ಗುಂಟೆಯಲ್ಲಿ 648 ನಿವೇಶನ ಗುರುತಿಸಲಾಗಿತ್ತು. ಪಟ್ಟಣದಲ್ಲಿ 2018ರಲ್ಲಿ 438 ನಿವೇಶನ ರಹಿತರಿಗೆ ತಮ್ಮ-ತಿಮ್ಮಿ ಗುಡ್ಡದಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆ ಅಡಿ ನಿವೇಶನ ಹಕ್ಕುಪತ್ರ ವಿತರಿಸಿದ್ದರು. 210 ನಿವೇಶನಗಳಿಗೆ ಫಲಾನುಭವಿಗಳ ಆಯ್ಕೆ ಆಗಬೇಕಾಗಿದೆ. ಆದರೆ ಹಕ್ಕು ಪತ್ರ ಪಡೆದ ಫಲಾನುಭವಿಗಳು ನಿವೇಶನವಿರುವ ಪ್ರದೇಶ ನೋಡಿಯೂ ಇಲ್ಲ, ಹೋಗಲು ದಾರಿಯಿಲ್ಲದಂತಹ ನಿರ್ಜನ ಕಾಡು ಪ್ರದೇಶ ಇದಾಗಿದೆ. ಇದೀಗ ಅಲ್ಲಿ ಅಭಿವೃದ್ಧಿ ಕಾರ್ಯ ನಡೆದಿದ್ದು ನಿವೇಶನ ಹಂಚಿಕೆ ಕಾಲ ಸನ್ನಿಹಿತವಾಗಿದೇಯೇ? ಫಲಾನುಭವಿಳ ಕನಸು ನನಸಾಗುವುದೋ ? ಕಾದು ನೋಡಬೇಕಿದೆ..
438 ನಿವೇಶನಗಳ ಹಕ್ಕುಪತ್ರ ಹಿಡಿದು ನಮ್ಮ ನಿವೇಶನ ಗುರುತಿಸಿಕೊಡಿ, ಅಲ್ಲಿ ಸೌಲಭ್ಯ ಕಲ್ಪಿಸಿ ಎಂದು ಕಳೆದ ಆರೇಳು ವರ್ಷದಿಂದ ನಿತ್ಯ ಪುರಸಭೆಗೆ ಅಲೆದಾಡಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಬದುಕಲಾದರೂ ಅವಕಾಶ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ. ಕವಿತಾ ಪಾಟೀಲ ಹಾಗೂ ಪಲ್ಲವಿ ಹಿರೇಮಠ- ಫಲಾನುಭವಿಗಳು.
ಸದ್ಯದಲ್ಲಿ ಆಶ್ರಯ ಸಮಿತಿ ಸಭೆ ಕರೆದು ಆಶ್ರಯ ಫಲಾನುಭವಿಗಳ ಆಯ್ಕೆ ಪಟ್ಟಿ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ಈಗಾಗಲೇ ತಮ್ಮ್ಮತಿಮ್ಮಿ ಗುಡ್ಡದ ನಿವೇಶನದಲ್ಲಿ ಸರ್ವೇದವರಿಂದ ನಿವೇಶನ ಅಳತೆ, ಹದ್ದುಬಸ್ತ್ ಮಾಡಲಾಗಿದೆ.ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಅಭಿವೃದ್ಧಿ ಪಡಿಸಲು ಅನುದಾನಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲದೆ, ಹಕ್ಕು ಪತ್ರ ಪಡೆದ ಫಲಾನುಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಡಾ. ಚಂದ್ರು ಲಮಾಣಿ ಶಾಸಕ ಯಲ್ಲವ್ವ ದುರಗಣ್ಣವರ- ಪುರಸಭೆ ಅಧ್ಯಕ್ಷೆ ತಮ್ಮತಿಮ್ಮಿಗುಡ್ಡದ 16 ಎಕರೆ ಆಶ್ರಯ ನಿವೇಶನದ ಜಮೀನಿಗೆ ದಾರಿಯೇ ಇಲ್ಲ. ಅಲ್ಲಿ ಆಶ್ರಯ ಪ್ಲಾಟ್ ಹಂಚಿದರೆ ಹೋಗುವುದು ಹೇಗೇ? ಆದ್ದರಿಂದ ರಸ್ತೆಗಾಗಿ ಜಮೀನು ಮಾರಾಟ ಮಾಡಲು ಒಪ್ಪಿರುವ ಮಾಲಿಕರಿಂದ ಖರೀದಿ ಪ್ರಕ್ರಿಯೆಯನ್ನು ಮಾಡಿಕೊಳ್ಳಬೇಕು. ಪ್ರವೀಣ ಬಾಳಿಕಾಯಿ- ಪುರಸಭೆ ಸದಸ್ಯ