ಇಸಿಜಿ ಜೀವ ಉಳಿಸುವ ಉತ್ತಮ ಸಾಧನ

26manju8
ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಇಸಿಜಿ ಕಾರ್ಯಾಗಾರ ಜರುಗಿತು. ಡಾ.ಎನ್.ಎಸ್. ಮಹಾಂತಶೆಟ್ಟಿ, ಕರ್ನಲ್ ಡಾ.ಎಂ ದಯಾನಂದ, ಡಾ.ವಿ.ಎ.ಕೋಠಿವಾಲೆ ಇತರರಿದ್ದರು.
Published on

ಬೆಳಗಾವಿ: ಹೃದಯದ ರಕ್ತನಾಳಗಳಲ್ಲಿ ಅಡೆತಡೆ ಸಮಸ್ಯೆಗಳನ್ನು ಇಸಿಜಿ ಯಂತ್ರದ ಮೂಲಕ ಪತ್ತೆ ಹಚ್ಚುವುದರಿಂದ ಶೀಘ್ರಚಿಕಿತ್ಸೆ ಆರಂಭಿಸಿ ಜೀವ ಉಳಿಸುವ ಅವಕಾಶಗಳು ಹೆಚ್ಚಿರುತ್ತದೆ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮೆಡಿಸಿನ್ ವಿಭಾಗ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಇಸಿಜಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸರಳ ಇಸಿಜಿ ಪ್ರಕ್ರಿಯೆಯಿಂದ ಹೃದಯದಲ್ಲಿರುವ ತೊಂದರೆ ಪತ್ತೆ ಹಚ್ಚಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿದೆ. ಇಸಿಜಿ ಯಂತ್ರದ ಬಳಕೆ, ಪ್ರಯೋಜನ ಕುರಿತು ಸಮಾಜದಲ್ಲಿ ಜಾಗೃತಿಯಾಗಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ ದಯಾನಂದ ಮಾತನಾಡಿ, ದುರ್ಗಮ ಪ್ರದೇಶದಲ್ಲಿ ವಾಸಿಸುವವರ ಹೃದ್ರೋಗವನ್ನು ಇಸಿಜಿಯಿಂದ ಕಂಡುಹಿಡಿದು ಜೀವ ಉಳಿಸಿದ ನಿದರ್ಶನಗಳಿವೆ. ಅದರಲ್ಲೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಇಸಿಜಿ ಬಹಳ ಪ್ರಯೋಜನಕಾರಿ ಎಂದರು.

ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ರೇಖಾ ಪಾಟೀಲ, ಡಾ.ವಿ.ಎ.ಕೋಠಿವಾಲೆ, ವೈದ್ಯಕೀಯ ಅಧಿಕ್ಷಕ ಡಾ.ಆರಿಫ್ ಮಾಲ್ದಾರ, ಡಾ.ಆರತಿ ದರ್ಶನ, ಡಾ.ಜ್ಞಾನೇಶ ಮೋರಕರ, ಡಾ.ರಾಜು ಬಡಿಗೇರ, ಡಾ.ಅಂಜಲಿ ಮೆಟಗುಡಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net