ಪಡಿತರ ಜೋಳ ತಿಂದರೆ ರೋಗ ಗ್ಯಾರಂಟಿ

Eating ration jowar is a guarantee of disease
Published on

ಕುಂದಗೋಳ: ಸಾಮಾನ್ಯವಾಗಿ ಅನ್ನ ತಿನ್ನುವುದಕ್ಕಿಂತ ರೊಟ್ಟಿ ತಿಂದರೆ ಗಟ್ಟಿ ಆಗುತ್ತೇವೆ ಎಂಬ ಮಾತಿದೆ. ಆದರೆ, ಪಡಿತರದ ಮೂಲಕ ವಿತರಿಸುತ್ತಿರುವ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆಗೆ ಸೇರುವುದಂತೂ ಗ್ಯಾರಂಟಿ ಎಂಬಂತಾಗಿದೆ. ದನಗಳು ಕೂಡ ತಿನ್ನದಷ್ಟು ಕಳಪೆಯಾಗಿರುವ ಜೋಳವನ್ನು ಬಡವರಿಗೆ ಸರ್ಕಾರ ನೀಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪಟ್ಟಣದ ಎನ್.ಎನ್. ಬಾನಿ ಎಂಬುವವರ ನ್ಯಾಯಬೆಲೆ ಅಂಗಡಿ ಹಾಗೂ ಹಿರೇನರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಪಡಿತರ ಕೊಡುವಾಗ ಕಸ, ಧೂಳು, ಹುಳು, ಜಿಡ್ಡು ಹಿಡಿದ ಜೋಳ ವಿತರಣೆ ಮಾಡಲಾಗಿದೆ. ಈ ಅಂಗಡಿಯಲ್ಲಿ ಬುಧವಾರ ಕಳಪೆ ಜೋಳವನ್ನು ಗ್ರಾಹಕರಿಗೆ ವಿತರಿಸಲಾಗಿತ್ತು. ಅದನ್ನು ಗ್ರಾಹಕರು ಮರಳಿ ತಂದು ನ್ಯಾಯಬೆಲೆ ಅಂಗಡಿಗೆ ಗುರುವಾರ ನೀಡುತ್ತಿದ್ದರು. ನಂತರ ಅದನ್ನೇ ಅಂಗಡಿಯವರು ಬೇರೆ ಗ್ರಾಹಕರಿಗೆ ಮರಳಿ ವಿತರಣೆ ಮಾಡುತ್ತಿದ್ದರು.

ಆಹಾರ ಇಲಾಖೆ ವಿರುದ್ಧ ಆಕ್ರೋಶ: ಪೂರ್ಣ ಹಾಳಾಗಿರುವ ಜೋಳ ವಿತರಿಸಿದ್ದಕ್ಕೆ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಕಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ, ಸರ್ಕಾರ ಏನು ಕೊಟ್ಟಿದೆಯೋ, ಅದನ್ನು ನಾವು ಕೊಡುತ್ತಿದ್ದೇವೆ ಅಷ್ಟೇ ಎಂದಿದ್ದಾರೆ. ಸರ್ಕಾರ ಪಡಿತರದಲ್ಲಿ ಕಳಪೆ ಜೋಳ ಕಳಪೆ ನೀಡುವುದು ಎಷ್ಟರಮಟ್ಟಿಗೆ ಸರಿ. ಸರ್ಕಾರಕ್ಕೆ ಬಡವರ ಬಗ್ಗೆ ಇರುವ ಕಾಳಜಿ ಇದೆಯೇ ಎಂದು ಸ್ಥಳೀಯರಾದ ಗಂಗಾಧರ, ಈಶ್ವರ, ಹಜರೇಸಾಬ, ಮಹೇಶ, ಮಂಜುಳಾ ಆಹಾರ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೆಎಫ್‌ಸಿಎಸ್‌ಸಿ ಗೋದಾಮಿನಿಂದ ಸರಿಯಾಗಿ ಶೇಖರಣೆ ಮಾಡಿಕೊಂಡು ಸರಾಸರಿ ಗುಣಮಟ್ಟ ಪರೀಕ್ಷಿಸಿ ವಿತರಣೆ ಮಾಡಬೇಕು. ಆದರೆ, ಇದಕ್ಕೆ ತದ್ವಿರುದ್ಧ ಎಂಬತೆ ಆಹಾರ ನಿರೀಕ್ಷರು ಜೋಳವನ್ನು ಸರಿಯಾಗಿ ಪರಿಶೀಲಿಸದೆ ಹಾಗೆ ವಿತರಣೆ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳಬೇಕು ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇನ್ನಾದರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಕಳಪೆ ಜೋಳ ವಿತರಣೆ ಆಗಿದೆಯೋ, ಅದೆಲ್ಲವನ್ನೂ ವಾಪಸ್ ಪಡೆದು ಗುಣಮಟ್ಟದ ಜೋಳ ವಿತರಣೆ ಮಾಡಬೇಕು ಎಂದು ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ತಾಲೂಕಿನಲ್ಲಿ ಮಳೆ ಹೆಚ್ಚಾಗಿ ಆಗಿ ರೈತರು, ಬಡವರು ಕಂಗಾಲಾಗಿದ್ದು, ಸರ್ಕಾರ ಕೊಡುವ ಉಚಿತ ಪಡಿತರ ನೆಚ್ಚಿ ಬದುಕು ಸಾಗಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯವರು ಹುಳು ಹಿಡಿದು ಹಾಳಾದ ಜೋಳ ವಿತರಿಸುತ್ತಿದ್ದಾರೆ. ಈ ಕಾಳಿನಿಂದ ಆಹಾರ ಮಾಡಿ ಸೇವಿಸಿ ಏನಾದರೂ ಹೆಚ್ಚು-ಕಡಿಮೆ ಆದರೆ ಬಡವರ ಜೀವಕ್ಕ ಹೊಣೆ ಯಾರು. ರೇಷನ್ ಅಂಗಡಿಯಲ್ಲಿ ಕೊಡುವಂತಹ ಜೋಳವನ್ನು ನಾವು ದನಕರುಗಳಿಗೂ ಹಾಕುವುದಿಲ್ಲ. ಹಾಳಾಗಿರುವ ಜೋಳ ಕೊಡುವುದು ಎಷ್ಟರ ಮಟ್ಟಿಗೆ ಸರಿ. ಸಂಬಂಧಪಟ್ಟವರು ಪರಿಶೀಲಿಸಿ, ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಂಜುನಾಥ ಗ್ರಾಹಕ, ಕುಂದಗೋಳ ಕಳಪೆ ಜೋಳ ವಿತರಣೆ ಆಗಿರುವುದು ಗಮನಕ್ಕೆ ಬಂದಿದೆ. ಕುಂದಗೋಳ ಪಟ್ಟಣದ ಬಾನಿಯವರ ನ್ಯಾಯಬೆಲೆ ಅಂಗಡಿಗೆ ಬಂದಿರುವ 40 ಚೀಲ ಹಾಗೂ ಹಿರೇನೆರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ 30 ಚೀಲ ಹಾಳಾದ ಜೋಳ ಬಂದಿರುವುದು ಗಮನದಲ್ಲಿದೆ. ನಾನು ಗೋದಾಮಿಗೆ ಹೋಗಿ ಪರಿಶೀಲಿಸುತ್ತೇನೆ. ರಾಜು ಮಾವರಕರ, ತಹಸೀಲ್ದಾರ್ ಕುಂದಗೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net