ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶವಿರಲಿ

04Jaggu5
ಬೆಳಗಾವಿ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಪೌಷ್ಟಿಕಾಂಶ ಸಪ್ತಾಹವನ್ನು ಡಾ. ಎಸ್.ಸಿ. ಧಾರವಾಡ ಉದ್ಘಾಟಿಸಿದರು. ವಿಕ್ರಾಂತ ನೇಸರಿ, ಡಾ.ಎಂ.ಎ.ಉಡಚನಕರ, ಡಾ.ಎಂ.ಎಸ್.ಕಡ್ಡಿ, ಡಾ.ವಿಜಯಕುಮಾರ ಮುರ್ಕಿಬಾವಿ, ಡಾ.ಸಿ.ವಿ.ಶೆಟ್ಟರ್ ಇತರಿದ್ದರು.
Published on

ಬೆಳಗಾವಿ: ನಿಯಮಿತವಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯಿಂದ ದೇಹ ಗಟ್ಟಿಯಾಗುತ್ತದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ.ಧಾರವಾಡ ಹೇಳಿದರು.

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆಎಲ್‌ಇ ಸೆಂಟಿನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಪೌಷ್ಟಿಕಾಂಶ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವಿಸುವ ಆಹಾರ ನಮಗೆ ಶಕ್ತಿಯ ಮೂಲವಾಗಿದೆ. ನಿಯಮಿತ ಆಹಾರ ಸೇವನೆ, ವ್ಯಾಯಾಮ, ಚಟುವಟಿಕೆಗಳಿಂದ ಕೂಡಿದ ಜೀವನಶೈಲಿಯು ರೋಗಮುಕ್ತ ಜೀವನಕ್ಕೆ ರಹದಾರಿಯಾಗಿದೆ ಎಂದರು.

ಕೆಎಲ್‌ಇ ಸೆಂಟಿನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ ಪ್ರಾಚಾರ್ಯ ವಿಕ್ರಾಂತ ನೇಸರಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಪೌಷ್ಟಿಕಾಂಶಗಳ ಜ್ಞಾನ ಅತ್ಯಗತ್ಯ. ಇದರಿಂದ ಮುಂದಿನ ಜೀವನ ಸುಖಮಯವಾಗಿರುತ್ತದೆ. ಸಪ್ತಾಹದಲ್ಲಿ ನೀಡಿದ ಜ್ಞಾನ ಅಳವಡಿಸಿಕೊಳ್ಳುವ ಜತೆಗೆ ನಾಲ್ಕಾರು ಜನರಿಗೆ ತಿಳಿಸಿದಾಗಲೇ ಪಡೆದ ಜ್ಞಾನ ಸಾರ್ಥಕ ಆಗುತ್ತದೆ ಎಂದರು.

ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎ.ಉಡಚನಕರ ಹಾಗೂ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲುಬು-ಕೀಲು ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ಮುರ್ಕಿಬಾವಿ, ಡಾ.ಸಿ.ವಿ.ಶೆಟ್ಟರ್, ಡಾ.ವಿನಾಯಕ ಇಂಗಳಗಿ, ಡಾ.ವಿನಾಯಕ ಟೊನ್ನೆ ಹಾಗೂ ಕೆಎಲ್‌ಇ ಸೆಂಟಿನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು. ನರ್ಸಿಂಗ್ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಅವರ ಸಂಬಂಧಿಕರಿಗೆ ಪೌಷ್ಟಿಕಾಂಶವುಳ್ಳ ಆಹಾರಗಳ ಬಗ್ಗೆ ಸಚಿತ್ರ ವಿವರಣೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net