ಕೆರೆಯಲ್ಲಿ ಸತ್ತ ಮೀನುಗಳನ್ನು ತಿನ್ನುವುದು ಪ್ರಾಣಕ್ಕೆ ಸಂಚಕಾರ

Fish dying again in Kukkarahalli lake
Published on

ಮೈಸೂರು: ಈ ಬಾರಿ ಬಿಸಿಲಿನ ತಾಪಕ್ಕೆ ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಇದರಿಂದ ಮೀನು ಸೇರಿದಂತೆ ಜಲಚರಗಳು ಮೃತಪಡುತ್ತಿವೆ. ಆದರೆ ಹೀಗೆ ಕೆರೆಯಲ್ಲಿ ಸತ್ತು ಬಿದ್ದ ಮೀನುಗಳನ್ನು ತಿನ್ನುವುದು ಪ್ರಾಣಕ್ಕೆ ಸಂಚಕಾರ ತರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿ ಬಸವನಹಳ್ಳಿ ಗ್ರಾಮದ ಕೆರೆಯಲ್ಲಿ ನೀರಿಲ್ಲದ ಕಾರಣ ಮೀನುಗಳು ಕೆರೆಯ ಮೇಲ್ಭಾಗದಲ್ಲಿ ಒದ್ದಾಡುತ್ತಿದ್ದವು. ಇದನ್ನು ಕಂಡು ಗ್ರಾಮಸ್ಥರು ಈ ಮೀನುಗಳನ್ನು ಹಿಡಿದು ಸಾರು ಮಾಡಿ ಸೇವಿಸಿದ್ದರು. ಬಳಿಕ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ, ಇಬ್ಬರು ಮೃತಪಟ್ಟರು. ಘಟನೆಗೆ ಆಹಾರ ಸೇವನೆ ಅಥವಾ ಕುಡಿಯುವ ನೀರು ಕಾರಣವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಸೂಚಿಸಿದ್ದಾರೆ. ಈ ನಡುವೆ ವೈದ್ಯರು ಕೆರೆಯಲ್ಲಿ ಸತ್ತ ಮೀನುಗಳಿಗೆ ಬ್ಯಾಕ್ಟೀರಿಯಾಗಳು ಬೇಗ ಮುತ್ತಿಕೊಳ್ಳುತ್ತವೆ. ಸತ್ತು ಕೊಳೆತ ನಂತರ ವಿಷಕಾರಕ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇಂತಹ ಮೀನುಗಳನ್ನು ತಿಂದರೆ ಪ್ರಾಣಕ್ಕೆ ಸಂಚಕಾರ ಎಂಬ ಎಚ್ಚರಿಕೆಯನ್ನೂ ವೈದ್ಯರು ನೀಡಿದ್ದಾರೆ.

ಮೀನಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಇರುತ್ತವೆ. ಇದನ್ನು ತಿನ್ನುವುದರಿಂದ ಹಲವು ಲಾಭಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾವುದೇ ಮೀನಾಗಲಿ ಸತ್ತ ಮೇಲೆ ಕೆಲ ದಿನಗಳ ನಂತರ ವಿಷಕಾರಿಯಾಗುತ್ತದೆ. ಹುಳುಗಳು ಮುತ್ತಿಕೊಳ್ಳುತ್ತವೆ. ಸತ್ತ ಮೀನುಗಳನ್ನು ವಿಲೇವಾರಿ ಮಾಡಬೇಕು. ಸತ್ತ ಮೀನನ್ನು ತಿನ್ನಬಾರದು ಎಂಬುದರ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕಿದೆ ಎಂದಿದ್ದಾರೆ.

ಕೆರೆಯಲ್ಲಿ ಮೀನುಗಳ ಮಾರಣಹೋಮ!

ದಿನೇ ದಿನೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದಂತೆ ಕೆರೆಗಳಲ್ಲಿ ನೀರು ಬತ್ತುತ್ತಿದೆ. ಕೆರೆ ಮಧ್ಯೆ ಹೊಂಡದಲ್ಲಿ ಬಿಸಿಲಿನ ಶಾಖಕ್ಕೆ ನೀರು ಬಿಸಿಯಾಗುವುದರಿಂದ ಮೀನುಗಳು ಸಾಯುತ್ತಿವೆ. ಕಡಿಮೆ ನೀರಿನಿಂದ ಮೀನುಗಳಿಗೆ ಚಲಿಸಲು ಜಾಗ ಸಿಗುವುದಿಲ್ಲ. ಜತೆಗೆ ಉಷ್ಣಾಂಶ ಹೆಚ್ಚಾದಾಗ ಆಮ್ಲಜನಕದ ಕೊರತೆ ಉಂಟಾಗಿ ಮೀನುಗಳು ಮೃತಪಡುತ್ತಿವೆ. ಒಂದು ಮೀನು ಸತ್ತ ಮೇಲೆ ಅದು ದಡಕ್ಕೆ ಬಂದು ತೇಲಲು ಒಂದು ದಿನ ಬೇಕು. ಈ ವೇಳೆಗೆ ಎಷ್ಟೋ ಮೀನುಗಳು ಕೊಳೆತು ಹೋಗಿರುತ್ತವೆ. ದಡಕ್ಕೆ ಬಂದಾಕ್ಷಣ ಬ್ಯಾಕ್ಟೀರಿಯಾಗಳು ಮುತ್ತಿಕೊಳ್ಳುತ್ತವೆ. ಅಂಗಡಿಯಲ್ಲಿ ಸಿಗುವ ಮೀನನ್ನು ಜೀವಂತವಾಗಿ ಬಲೆಯಲ್ಲಿ ಹಿಡಿದು ಅದನ್ನು ಐಸ್‌ನಲ್ಲಿ ಸಂರಕ್ಷಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಸತ್ತ ಕೊಳೆತ ಮೀನುಗಳ ಸೇವನೆ ಒಳ್ಳೆಯದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net