

ಹಗರಿಬೊಮ್ಮನಹಳ್ಳಿ: ಪ್ರಥಮ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಖಚಿತವಾಗಿ ಗುಣಪಡಿಸಬಹುದು ಎಂದು ದಿ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞ ಡಾ.ಉಮೇಶ್ ಹಳ್ಳಿಕೇರಿ ಹೇಳಿದರು.
ಮಾಲವಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಚಾಲಕರ ತರಬೇತಿ ಕೇಂದ್ರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವಿಜಯನಗರ ಜಿಲ್ಲಾ ಘಟಕ, ಕೆಕೆಆರ್‌ಟಿಸಿ ಹೊಸಪೇಟೆ ಘಟಕ, ಆರೋಗ್ಯ ಇಲಾಖೆ, ದಿ ಕರ್ನಾಟಕ ಕ್ಯಾನ್ಸರ್ ಥೆರಪಿ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನೇ ಸೇವಿಸಬೇಕು. ದೈಹಿಕ ಚಟುವಟಿಕೆ, ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸ್ತನ ಹಾಗೂ ಗರ್ಭ ಕ್ಯಾನ್ಸರ್‌ಗಳನ್ನು ಪ್ರಥಮ ಹಂತದಲ್ಲೇ ಗುರುತಿಸುವುದರಿಂದ ಅತ್ಯಂತ ಸಮರ್ಪಕ ಚಿಕಿತ್ಸೆ ನೀಡಿಬಹುದು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ವ್ಯವಸ್ಥಾಪಕ ರವಿಶಂಕರ್ ಮಾತನಾಡಿ, ಬಸ್ ಚಾಲಕರದು ಅತ್ಯಂತ ಜವಾಬ್ದಾರಿಯುತ ಉದ್ಯೋಗವಾಗಿದ್ದು, ನಿಮ್ಮ ಕೈಯಲ್ಲಿ ಪ್ರಯಾಣಿಕರ ಜೀವವಿರುತ್ತದೆ. ಇದರಿಂದಾಗಿ ಚಾಲಕರು ಹೆಚ್ಚು ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ರೆಡ್‌ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ, ಕಾರ್ಯಕಾರಿ ಸಮಿತಿ ಸದಸ್ಯರಾದ ಅನ್ನಪೂರ್ಣಾರೆಡ್ಡಿ, ಬಿಂದು ಮಲ್ಲಿಕಾರ್ಜುನ, ಡಾ.ಪ್ರಿಯಾಂಕಾ, ತರಬೇತಿ ಕೇಂದ್ರದ ಪ್ರಾಚಾರ್ಯ ಬಸವರಾಜ, ಸಿಬ್ಬಂದಿ ಮಹಾಂತೇಶ, ಶಿವಕುಮಾರ ಇತರರಿದ್ದರು.