

ಮಡಿಕೇರಿ: ರಸಾಯನಿಕ ಯುಕ್ತ ಜಂಕ್ ಆಹಾರಗಳನ್ನು ದೂರವಿಟ್ಟು ನಿಸರ್ಗದಲ್ಲಿ ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಯೆಗಳನ್ನು ಬಳಸಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಂತೆ ಕೊಡಗಿನ ಪ್ರಥಮ ಪಾಕಶಾಸ್ತ್ರ ಕೈಪಿಡಿಯ ಲೇಖಕಿ ಚೆಟ್ಟಳ್ಳಿಯ ಆಶಾ ತಿಮ್ಮಪ್ಪಯ್ಯ ಸಲಹೆ ನೀಡಿದರು.
ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊಂಬೆಳಕು ಮಾಸಿಕ ತತ್ವ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಆಹಾರದ ಮೂಲಮಂತ್ರಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವ್ಯಾಪಾರೀಕರಣ ಇಂದು ವ್ಯಾಪಕವಾಗಿ ಹರಡುತ್ತಿದೆ. ಈ ದಿನಗಳಲ್ಲಿ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮಾರುಹೋಗಿ ದೇಹಕ್ಕೆ ಅಗತ್ಯವಿಲ್ಲದ ತಿನಿಸುಗಳನ್ನು ತಿನ್ನುವುದು ತಪ್ಪಬೇಕು. ಪ್ರಕೃತಿಯು ಕಾಲಕಾಲಕ್ಕೆ ನಮಗೆ ಪೂರೈಸುವ ಎಲ್ಲಾ ರೀತಿಯ ಹಣ್ಣುಗಳನ್ನು ನಾವು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ ಎಂದರು.
ಕಣಿಲೆ, ಬಾಳೆ ದಿಂಡು, ಹಲಸು ಮೊದಲಾದ ತಿನಿಸುಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಆರೋಗ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕಾಗಿದೆ. ಸಕ್ಕರೆಯನ್ನು ಆಹಾರದಲ್ಲಿ ಹೆಚ್ಚು ಬಳಸದೇ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿದಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಸಕ್ಕರೆಯ ಅಂಶ ಪೂರೈಕೆಯಾಗುತ್ತದೆ ಎಂದು ಹೇಳಿದರು.
ಮಹಿಳೆಯರು ಪರಸ್ಪರ ಸಂಭಾಷಿಸುವಾಗ ಆಹಾರ ಹಾಗೂ ಅಡುಗೆಯ ವಿಚಾರವಾಗಿ ಸಾಕಷ್ಟು ಕಲಿಯಬಹುದಾಗಿದೆ. ಸಂಪ್ರದಾಯ ಹಾಗೂ ಸಂಸ್ಕ್ರತಿಗಳಿಗೆ ಹೊಂದಿಕೆಯಾಗುವ ಸಾತ್ವಿಕವಾದ ಆಹಾರಗಳನ್ನು ತಯಾರಿಸುವಲ್ಲಿ ಮಹಿಳೆಯರು ಹೆಚ್ಚು ಗಮನ ಹರಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶರೀರ ಸದೃಢವಾಗಿರಲು ಆಹಾರದ ಮಹತ್ವ ಬಹಳ ಮುಖ್ಯ. ಮನುಷ್ಯ ಶತಾಯುವಾಗಲು ಆಹಾರದ ಕ್ರಮ ಅಷ್ಟೇ ಸರ್ವ ಶ್ರೇಷ್ಠವಾಗಿರಬೇಕು. ಮನುಷ್ಯ ಧಾವಂತದ ಬದುಕಿನಲ್ಲಿ ಸಂಪತ್ತಿನ ಹಿಂದೆಯೇ ಓಡುತ್ತಿದ್ದಾನೆ. ಹಿಂದಿನ ಕಾಲದ ರೀತಿಯಲ್ಲಿ ಸೌದೆಯಿಂದ ಬೇಯಿಸಿದ, ಚಕ್ಕಲಬಕ್ಕಲ ಹಾಕಿ ನೆಲದಲ್ಲಿ ಕುಳಿತು ಇತಿ ಮಿತಿಯಾಗಿ ಶ್ರದ್ಧೆಯಿಂದ ಸೇವಿಸುವ ಜೀವನ ಶೈಲಿ ಮರುಕಳಿಸಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಹೊಲ-ಗದ್ದೆ, ತೋಟದ ಕೃಷಿಯ ಅನುಭವ ಕಲಿಸದ ರೀತಿ ಬೆಳೆಸುತ್ತಿರುವುದು ಶೋಚನೀಯ ಎಂದು ವಿಷಾದಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷಿತಜ್ಞ ವಿರಾಜಪೇಟೆಯ ಡಾ.ನರಸಿಂಹನ್, ಚೆಟ್ಟಳ್ಳಿಯ ಕಾಫಿ ಬೆಳೆಗಾರ ಎಚ್.ಎಸ್.ತಿಮ್ಮಪ್ಪಯ್ಯ, ಸಾಹಿತಿ ಕಿಗ್ಗಾಲು ಗಿರೀಶ್, ನಿವೃತ್ತ ಮೇಜರ್ ಗಿರಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ನಿರ್ದೇಶಕ ಪರಮೇಶ್, ಕಾರ್ಯಕ್ರಮದಲ್ಲಿ ಹಾಜರಿದ್ದರು.