

ಮಡಿಕೇರಿ: ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಆರೋಗ್ಯವಾಗಿರಲು ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಕಗ್ಗೋಡ್ಲು ಗ್ರಾಮದ ಆಶಾ ಕಾರ್ಯಕರ್ತೆ ಯಶೋಧ ಕುಮಾರಿ ಕಿವಿಮಾತು ಹೇಳಿದರು.
ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಹಾಕತ್ತೂರು ಗ್ರಾಮ ಪಂಚಾಯಿತಿಯ ಹೂಕಾಡು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ ಅಭಿಯಾನ ಹಾಗೂ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಯಿ ಆರೋಗ್ಯವಾಗಿರಲು ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ತಾಯಿಯ ಜತೆಗೆ ಮಗುವಿನ ಆರೊಗ್ಯವೂ ಉತ್ತಮವಾಗಿರುತ್ತದೆ. ಮಕ್ಕಳ ಪೋಷಣೆ ಮತ್ತು ಬಾಣಂತಿಯರ ಆರೈಕೆ ಬಹಳ ಮುಖ್ಯ. ನವಜಾತ ಶಿಶುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದರು.
ಅಪೌಷ್ಟಿಕತೆಯನ್ನು ಹೋಗಲಾಡಿಸಿ ಪೌಷ್ಠಿಕತೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮದ ಉದ್ದೇಶ ಎಂದು ವಿವರಿಸಿದರು.
ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರದ ಸಹಾಯಕಿ ಲೀಲಾ, ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ ಕುಮಾರಿ, ಹೇಮಲತಾ, ದೇವಕಿ, ಗರ್ಭಿಣಿ, ಬಾಣಂತಿಯರು, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆ ಪೋಷಣಾ ಆಹಾರ ಉತ್ಪನ್ನಗಳ ಪ್ರದರ್ಶನ ನಡೆಯಿತು.