

ಕುಂದಾಪುರ: ಆಷಾಢ ವಾಸದಲ್ಲಿ ಜಡಿ ಮಳೆ, ತಂಪು ಹವೆ, ಸೂರ್ಯ ಕಿರಣದ ಕೊರತೆಯಿರುವುದರಿಂದ ಪ್ರಕೃತಿಯೇ ವಿಭಿನ್ನವಾಗಿರುತ್ತದೆ. ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವ ನಮ್ಮ ದೇಹಾರೋಗ್ಯವೂ ಈ ಕಾಲದಲ್ಲಿ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಇದಕ್ಕನುಗುಣವಾಗಿಯೇ ನಾವು ಆಹಾರ, ಪಾನೀಯಗಳನ್ನು ಸ್ವೀಕರಿಸುವುದರಿಂದ ಆರೋಗ್ಯದ ಸಮಸ್ಯೆ ಉಂಟಾಗುವುದಿಲ್ಲ ಎಂದು ಆಯುರ್ವೇದ ತಜ್ಞೆ ಡಾ.ಪ್ರತಿಭಾ ಕಾರಂತ ಹೇಳಿದರು. ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್‌ನ ಮಹಿಳಾ ವೇದಿಕೆ ಆಶ್ರಯದಲ್ಲಿ ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ‘ಆಸಾಡಿ ಗಮ್ಮತ್ 2025’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬ್ರಾಹ್ಮಣ ಸಭಾ ಉಪಾಧ್ಯಕ್ಷ, ತಾಲೂಕು ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ ಶುಭಾಶಂಸನೆಗೈದರು. ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರತ್ನಾ ಉಡುಪ ಸ್ವಾಗತಿಸಿ, ವಸಂತಿ ಮಿತ್ಯಂತ ವಂದಿಸಿದರು. ಸೌಮ್ಯ ಮತ್ತು ಪಲ್ಲವಿ ಪ್ರಾರ್ಥಿಸಿದರು. ಗಾಯತ್ರಿ ಅಡಿಗ ನಿರೂಪಿಸಿದರು.
ಅನಸೂಯಾ ಟೀಚರ್ ಆಸಾಡಿ ಹಬ್ಬದ ಬಗ್ಗೆ ಸ್ವರಚಿತ ಕವನ ವಾಚಿಸಿದರು. ನಾಗರತ್ನಾ ಉಡುಪ ಭತ್ತ ಕುಟ್ಟುವ ಹಾಡು ಹಾಡಿದರು. ಮಹಿಳೆಯರು ಮನೆಯಲ್ಲೇ ತಯಾರಿಸಿ ತಂದ 35 ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ತಿಂಡಿಗಳನ್ನು ಸವಿಯಲಾಯಿತು.