

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಐದೂ ಪಾಲಿಕೆಗಳ ಆದಾಯದ ಹಣವನ್ನು ಆ ಪ್ರದೇಶಗಳಲ್ಲಿಯೇ ಅಭಿವೃದ್ಧಿಗಾಗಿ ಮೀಸಲಿಡಲಾಗುವುದು. ಅದೇ ರೀತಿ ಪೂರ್ವ ಪಾಲಿಕೆಯಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಈ ಭಾಗದ ಡೆವಲಪ್ಮೆಂಟ್‌ಗೆ ಬಳಸಿಕೊಳ್ಳಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಕೆ.ಆರ್.ಪುರದ ಟಿ.ಸಿ.ಪಾಳ್ಯ ಬಳಿಯ ವೆಂಗಯ್ಯನ ಕೆರೆಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ನಡಿಗೆ’ ಅಭಿಯಾನದ ವೇಳೆ ನಾಗರಿಕರೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಬಿಎನ ಎಲ್ಲ ಕಾಪೋರೇಷನ್‌ಗಳಿಂದ ವಾರ್ಷಿಕ 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ. ಈ ಪೈಕಿ ಪೂರ್ವ ಪಾಲಿಕೆ ಒಂದರಲ್ಲೇ 1,600 ಕೋಟಿ ರೂ. ಸಂಗ್ರಹವಾಗಲಿದ್ದು, ಶ್ರೀಮಂತ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿದೆ. ಜನರು ನೀಡಿದ ತೆರಿಗೆ ಹಣದ ಪೂರ್ಣ ಹಣವನ್ನು ಈ ಭಾಗದಲ್ಲಿಯೇ ಬಳಸಲಾಗುವುದು. ರಸ್ತೆ, ಚರಂಡಿ ಸೇರಿ ವಿವಿಧ ಮೂಲಸೌಕರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ವಾಗ್ದಾನ ನೀಡಿದರು.
ಈ ಹಿಂದೆ ಒಂದೇ ಪಾಲಿಕೆ ಇದ್ದಾಗ ಕೆ.ಆರ್.ಪುರ ಹಾಗೂ ಮಹದೇವಪುರ ಭಾಗದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದ್ದರೂ, ಹೆಚ್ಚಿನ ಪಾಲು ನೀಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಹೊಸ ಪಾಲಿಕೆಯಾದ ಬಳಿಕ ಸಂಗ್ರಹವಾಗುವ ಅಷ್ಟೂ ಹಣವನ್ನು ಇಲ್ಲಿಯೇ ಬಳಸಲು ಯಾವುದೇ ಅಡ್ಡಿ ಇಲ್ಲ. ಮುಖ್ಯವಾಗಿ ಈ ಭಾಗದಲ್ಲಿರುವ ಐಟಿ ವಲಯದ ಪ್ರದೇಶಗಳಲ್ಲೂ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ಸಿಗಲಿದೆ ಎಂದು ತಿಳಿಸಿದರು.
ಬಿ ಖಾತಾ ಮಾಲೀಕರಿಗೆ ಎ ಖಾತಾ ಸೌಲಭ್ಯ:
ಕೆ.ಆರ್.ಪುರ ಭಾಗದಲ್ಲಿ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಿವೆ. ಒಬ್ಬೊಬ್ಬರು ಐದಾರು ನಿವೇಶಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಟ್ಟುವ ಕಟ್ಟಡಗಳನ್ನು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ನೆಲಸಮ ಮಾಡಲಾಗುವುದು. 30/40 ಅಡಿ ಅಳತೆಯ ಕಟ್ಟಡಗಳಿಗೆ ಓಸಿ/ಸಿಸಿ ವಿನಾಯಿತಿ ನೀಡಲಾಗಿದೆ. ಇದು ತಾತ್ಕಾಲಿಕ ವಿನಾಯಿತಿ. ಹೀಗಾಗಿ ಮುಂದೆ ಎಲ್ಲರೂ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಬೇಕು. ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ ಮಾಡುವುದು, ಸೆಟ್ ಬ್ಯಾಕ್ ಬಿಡದೆ ಒತ್ತೊತ್ತಾಗಿ ಮನೆ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬೈರತಿ ಬಸವರಾಜು, ಮಾಜಿ ಶಾಸಕಿ ಪೂರ್ಣಿಮಾ, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಇತರ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ವಿವಿಧ ರಸ್ತೆಗಳಿಗೆ ಸುರಂಗ ಮಾರ್ಗ ಸಂಪರ್ಕ:
ಮುಂದಿನ ದಿನಗಳಲ್ಲಿ ಪೂರ್ವ-ಪಶ್ಚಿಮ ಸುರಂಗ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಾಗ ಕೆ.ಆರ್.ಪುರ ಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸಲಾಗುವುದು. ಜತೆಗೆ ಮೆಟ್ರೋ, ಎಲಿವೇಟೆಡ್ ರಸ್ತೆಗೂ ಸಂಪರ್ಕ ಕಲ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಇದರಿಂದ ಭವಿಷ್ಯದಲ್ಲಿ ಕೆ.ಆರ್.ಪುರ ಪ್ರದೇಶದಲ್ಲಿ ಸಂಚಾರ ಸಿಕ್ಕು ನಿವಾರಣೆಯಾಗಲಿದೆ. ಟನಲ್ ರಸ್ತೆಯನ್ನು ಜನರ ಉಪಯೋಗಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ಬೆಂಗಳೂರು ನಡಿಗೆ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಕಾರ್ಪೊರೇಟರ್‌ಗಳು ಹಾಗೂ ನಿವಾಸಿ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುವೆ. ಅವರೆಲ್ಲರ ಸಲಹೆಗಳನ್ನು ಸರ್ಕಾರ ಹಾಗೂ ಜಿಬಿಎಗೆ ತಲುಪಿಸಲಾಗುವುದು ಎಂದು ಡಿಕೆಶಿ ಭರವಸೆ ನೀಡಿದರು.
ಐಟಿ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ:
ನಗರದಲ್ಲಿ ಐಟಿ- ಬಿಟಿ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ನಾನು ಹಾಗೂ ಐಟಿ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿ ಅಹವಾಲು ಆಲಿಸುತ್ತೇವೆ. ಈ ಹಿಂದೆ ಉದ್ಯಮಿಗಳಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದೆ. ಆ ವಾಗ್ದಾನವನ್ನು ಈಡೇರಿಸಲು ಬದ್ಧವಾಗಿದ್ದೇವೆ. ಯಾರು ಏನೇ ಟೀಕೆ ಟಿಪ್ಪಣಿ ಮಾಡಿದರೂ, ನಮ್ಮ ಕೆಲಸದಿಂದ ಉತ್ತರ ನೀಡುತ್ತೇವೆ. ನಾವೆಂದೂ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜನರು ನಮಗೆ ಆಶೀರ್ವಾದ ಮಾಡಿದ್ದು, ನಾವು ಅವರ ಸೇವೆ ಮಾಡಲೆಂದೇ ಅಧಿಕಾರದಲ್ಲಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ಕೆ.ಆರ್.ಪುರದ ಆಸ್ಪತ್ರೆ, ಅಕ್ರಮ ಭೂ ಒತ್ತುವರಿ, ಸಂತೆಯ ಸ್ಥಳಾಂತರ, ಸಂಚಾರ ದಟ್ಟಣೆ ನಿವಾರಣೆಗೆ ಜನರಿಂದ ಹಲವು ಮನವಿಯನ್ನು ಸ್ವೀಕರಿಸಲಾಗಿದೆ. ಈ ಎಲ್ಲ ವಿಚಾರಗಳಿಗೂ ನಾವು ಶೀಘ್ರ ಸ್ಪಂದಿಸಲಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತಪ್ಪಿಸಲು ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲಾಗಿದೆ. ನಗರದಲ್ಲಿ ಸುಮಾರು 30 ಸಾವಿರ ರಸ್ತೆಬದಿ ವ್ಯಾಪಾರಿಗಳಿದ್ದು, ಅವರಿಗೆ ನೆರವು ನೀಡಲಾಗುವುದು.
- ಡಿ.ಕೆ.ಶಿವಕುಮಾರ್, ಡಿಸಿಎಂ