ಯಂತ್ರವಾಗೋದು ಬೇಡ, ಮನುಷ್ಯರಾಗಿರೋಣ...

Kalaa Sanje
Published on

ತೊಟ್ಟಂ ಚರ್ಚ್​ನ ಫಾದರ್​ ಡೆನಿಸ್​ ಡೆಸಾ ಅನಿಸಿಕೆ

ಪ್ರತಿಭಾಂಗಣ ಸಾಂಸ್ಕೃತಿಕ ಸಂಘಟನೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಿತ್ಯ ಒತ್ತಡದಲ್ಲೇ ಮುಳುಗಿರುವ ಮನುಷ್ಯನ ಬದುಕಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಾಗಿ ಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಾವೆಲ್ಲ ಮನುಷ್ಯರಾಗಿ ಇರಬೇಕೇ ಹೊರತು ಯಂತ್ರಗಳಾಗಬಾರದು ಎಂದು ತೊಟ್ಟಂ ಚರ್ಚ್​ನ ಪ್ರಧಾನ ಧರ್ಮಗುರು ವಂ. ಡೆನಿಸ್​ ಡೆಸಾ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿ ಪ್ರದೇಶ ಕಥೊಲಿಕ್​ ಸಭಾದ ತೊಟ್ಟಂ ಸಂತ ಅನ್ನಮ್ಮ ಚರ್ಚ್​ ಘಟಕದ ವಿವಿಧ ಯೋಜನೆಗಳ ಸಹಾಯರ್ಥವಾಗಿ ಚರ್ಚ್​ನ ಬಯಲು ರಂಗ ವೇದಿಕೆಯಲ್ಲಿ ಏ.27ರಂದು ರಾತ್ರಿ ಆಯೋಜಿಸಿದ್ದ ಈಸ್ಟರ್​ ಕಲಾ ಸಂಜೆ ಕಾರ್ಯಕ್ರಮದಲ್ಲಿ ಪ್ರತಿಭಾಂಗಣ ಸಾಂಸ್ಕೃತಿಕ ಸಂಘಟನೆ ಉದ್ಘಾಟಿಸಿ ಮಾತನಾಡಿದರು.

ಈಸ್ಟರ್​ ಕಲಾ ಸಂಜೆ ಕಾರ್ಯಕ್ರಮವನ್ನು ಕೊಂಕಣಿ ಭಾಷೆಯ ಖ್ಯಾತ ಗಾಯಕರಾಗಿದ್ದ ದಿ.ವಿಲ್ಫಿ ರೆಬಿಂಬಸ್​ ಮತ್ತು ಕೊಂಕಣ ಮೈನಾ ಮೀನಾ ರೆಬಿಂಬಸ್​ ಅವರ ಪುತ್ರ ಗಾಯಕ ವಿಶ್ವಾಸ ರೆಬಿಂಬಸ್​ ಉದ್ಘಾಟಿಸಿ ಶುಭ ಹಾರೈಸಿದರು.

ಗಮನ ಸೆಳೆದ ಕಾರ್ಯಕ್ರಮ

Kalaa Sanje 2
ಕಲಾಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ತಂಡ ನೆಲ್ಸನ್​ ಲೂವಿಸ್​ ಸಂತೆಕಟ್ಟೆ ಅವರ ಕ್ಯಾರಲ್ಸ್​ ಬೀಟ್​ ಗ್ರೂಪ್​ ತಂಡ, ಸ್ಥಳೀಯ ಕಲಾವಿದರು ಕೊಂಕಣಿ, ಕನ್ನಡ, ಹಿಂದಿ ಗೀತೆಗಳನ್ನು ಹಾಡಿದರು. ಮಂಗಳೂರಿನ ಮೆಮೊರಿ ಇವರಿಂದ ಹಾಸ್ಯ ಕಾರ್ಯಕ್ರಮ, ಪ್ರತಿಭಾಂಗಣ ಕಲಾವಿದರಿಂದ ನಡೆದ ವೆಚಿಕ್​ ಪೂತ್​ ಹಾಸ್ಯ ಪ್ರಹಸನ, ಡೆನಿಸ್​ ಡೆಸಾ ಹಾಡಿದ ತಾಯಿಯ ಪ್ರೀತಿ ಮತ್ತು ಮಮತೆ ಸಾರುವ ಕೊಂಕಣಿ ಗೀತೆ ಪ್ರೇಕ್ಷಕರ ಮನ ಸೆಳೆಯಿತು.

ಚರ್ಚ್​ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ ಫೆರ್ನಾಂಡಿಸ್​, ಸ್ಥಳೀಯ ಕಾನ್ವೆಂಟ್​ನ ಮುಖ್ಯಸ್ಥೆ ಸಿಸ್ಟರ್​ ಸುಶ್ಮಾ, ಪ್ರತಿಭಾಂಗಣ ಸಂಘಟನೆಯ ಅಧ್ಯಕ್ಷ ಕ್ಲಾರೆನ್ಸ್​ ಫೆರ್ನಾಂಡಿಸ್​ ಉಪಸ್ಥಿತರಿದ್ದರು.

ಕಥೊಲಿಕ್​ ಸಭಾ ತೊಟ್ಟಂ ಘಟಕದ ಅಧ್ಯೆ ವೀನಾ ಫೆರ್ನಾಂಡಿಸ್​ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಿ ಪಿಕಾರ್ಡೊ ವಂದಿಸಿದರು. ಲವೀನಾ ಫೆರ್ನಾಂಡಿಸ್​ ಸಭಾ ಕಾರ್ಯಕ್ರಮ ಹಾಗೂ ನಾನು ಮರೋಲ್​ ತೊಟ್ಟಂ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಸಮುದಾಯದಲ್ಲಿ ಸಂಘಟನಾತ್ಮಕವಾಗಿ ಒಗ್ಗಟ್ಟಿನಿಂದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಾಗ ಉತ್ತಮ ಫಲಿತಾಂಶ ಸಾಧ್ಯ. ನಾವು ನೀಡುವ ಸೇವೆ ಸಮುದಾಯದ ಒಳಿತಿಗೆ ಕಾರಣವಾಗುವಂತೆ ಇರಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು. | ರೊನಾಲ್ಡ್​ ಡಿ ಆಲ್ಮೇಡಾ. ಉಡುಪಿ ಪ್ರದೇಶ ಕಥೊಲಿಕ್​ ಸಭಾದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net